ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ : ಮಾಜಿ ಸಚಿವ ಕುಮಾರ ಬಂಗಾರಪ್ಪ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಕ್ಷದ ವರಿಷ್ಟರ ಮುಂದೆ ಅಭಿಪ್ರಾಯ ತಿಳಿಸಲಾಗಿದೆ. ಶೀಘ್ರವೇ ವರಿಷ್ಠರು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಮರಳಲಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.
ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕುಮಾರ ಬಂಗಾರಪ್ಪ, ರಾಜ್ಯಾಧ್ಯಕ್ಷರ ಬದಲಾವಣೆ ವಿಷಯದಲ್ಲಿ ನಾವು ಸೋತಿಲ್ಲ. ಎಲ್ಲರೂ ಒಟ್ಟಾಗಿ ಬದಲಾವಣೆ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ಸ್ಪಂದನೆ ದೊರೆಯದೇ ಹೋದಲ್ಲಿ ಅವರ ದಾರಿ ಅವರಿಗೆ ನಮ್ಮದಾರಿ ನಮಗೆ. ಆದರೆ ಪಕ್ಷ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದಕೊಳ್ಳುವ ಭರವಸೆಯಿದೆ. ಮಾಜಿ ಸಚಿವ ಬಸನಗೌಡ ಯತ್ನಾಳ ಶೀಘ್ರದಲ್ಲಿ ಮರಳಿ ಪಕ್ಷಕ್ಕೆ ಬರುವ ವಿಶ್ವಾಸವಿದೆ. ಅವರೊಂದಿಗೆ ನಾವಿದ್ದೇವೆ. ನಾವೆಂದು ಬದಲಾಗಿಲ್ಲ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಸತ್ತಿನಿಂದ ಕಾಯ್ದೆಯಾಗಿ ಪಾಸಾಗಿದ್ದು, ದೇಶದ ಸಂಸತ್ತಿಗೆ ಗೌರವಿಸಬೇಕು. ಜೀವನೋಪಾಯ ಯೋಜನೆ ಸೇರಿ ವಿಕಸಿತ ಭಾರತ ಒಗ್ಗೂಡಿಸಿ ಕಾಯ್ದೆ ರೂಪಿಸಲಾಗಿದೆ. ಮಹಾತ್ಮ ಗಾಂಧಿ ಎಂದಿಗೂ ಮಹಾತ್ಮರೇ. ಹೆಸರು ಬದಲಾವಣೆ ಮಾಡಿದರೆ ಗೌರವ ಕಡಿಮೆ ಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಭದ್ರ ಯೋಜನೆಗೆ ಅನುದಾನ ಕೇಂದ್ರ ಘೋಷಣೆ ಮಾಡಿತ್ತು. ಆದರೆ ರಾಜ್ಯ ಸರಕಾರ ಸೂಕ್ತ ದಾಖಲೆಗಳನ್ನು ನೀಡದೇ ಇರುವುದು ಅನುದಾನ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕೆ.ಎಂ.ಪಾಟೀಲ್, ಡಾ.ನಾಗರಾಜ ಬಾಲ್ಕಿ, ಕಿರಣ ಬೆಲ್ಲಂ, ನಾಗನಗೌಡ ಹರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







