ಮಾನ್ವಿಯಲ್ಲಿ 29 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ : ಸಚಿವ ಬೋಸರಾಜು

ಮಾನ್ವಿ: 22 ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿಗೆ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಹಾಗೂ 7 ಕೋಟಿ ರೂ. ವೆಚ್ಚದ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಾಮಗಾರಿಗೆ ಮಾನ್ವಿ ಪಟ್ಟಣದ ಶಿವಜ್ಯೋತಿ ಕಾಲೋನಿಯಲ್ಲಿ ಶನಿವಾರ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾನ್ವಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಜಾಸೌಧ ಮತ್ತು ಇನ್ನೊಂದು 10 ಕೋಟಿ ರೂ. ವೆಚ್ಚದಲ್ಲಿ ಮಿನಿ ಬಸ್ ನಿಲ್ದಾಣ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವೀಕ್ಷಿಸಿ, ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರ 50 ಕೋಟಿ ರೂ. ಅನುದಾನದಲ್ಲಿ ಮಾನ್ವಿ ಕ್ಷೇತ್ರಕ್ಕೆ ಈಗಾಗಲೇ 32 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಉಳಿದ 12 ಕೋಟಿ ರೂ. ವೆಚ್ಚದಲ್ಲಿ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಸ್‌ಹೆಚ್‌ಡಿಪಿ ಯೋಜನೆಯಡಿ 25 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಆರ್‌ಎಫ್ ಯೋಜನೆಯಡಿ ಸಹ ಅನುದಾನವನ್ನು ಕೇಳಲಾಗಿದೆ ಎಂದರು.
ನೀರಮಾನ್ವಿ–ಸಿರವಾರ, ಹಿರೇಕೊಟ್ನೆಕಲ್–ಹಿರೇಹಣಗಿ ಹಾಗೂ ಪೋತ್ನಾಳ್–ಉದ್ಬಾಳ್ ರಸ್ತೆ ಅಭಿವೃದ್ಧಿಗೆ 60 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಈಗಾಗಲೇ 10 ಕೋಟಿ ರೂ. ವೆಚ್ಚದಲ್ಲಿ ಉಟಕನೂರು ಸೇತುವೆ ಹಾಗೂ 4 ಕೋಟಿ ರೂ. ವೆಚ್ಚದಲ್ಲಿ ಬೆಳವಾಟ–ದೋತರಬಂಡಿ ರಸ್ತೆ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಕವಿತಾಳ ಪಟ್ಟಣದ 3 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಹಾಗೂ ಸಿರವಾರ ಪಟ್ಟಣದ 3 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ. ಸೇರಿ ಒಟ್ಟು 27 ಕೋಟಿ ರೂ. ಮಂಜೂರಾಗಿದೆ. ಸಿರವಾರದಲ್ಲಿ ಸರ್ಕ್ಯೂಟ್ ಹೌಸ್ ನಿರ್ಮಾಣಕ್ಕೆ 2 ಕೋಟಿ ರೂ. ಬಿಡುಗಡೆಯಾಗಿದ್ದು, ಮಾನ್ವಿಯಲ್ಲಿ ಸರ್ಕ್ಯೂಟ್ ಹೌಸ್ ನಿರ್ಮಾಣಕ್ಕೆ ಹೊಸ ಸ್ಥಳ ಹುಡುಕಲಾಗುತ್ತಿದೆ. ಸಿರವಾರದಲ್ಲಿ 6 ಕೋಟಿ ವೆಚ್ಚದ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಕವಿತಾಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ ಹಾಗೂ ಮಾನ್ವಿ ಪಟ್ಟಣದ ಕ್ರೀಡಾಂಗಣ ಬಾಕಿ ಕಾಮಗಾರಿ ಪೂರ್ಣಗೊಳಿಸಲು 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮಾನ್ವಿ ವಿಧಾನಸಭೆ ಕ್ಷೇತ್ರದ ವಿವಿಧ ಕಡೆಗಳಲ್ಲಿ 47 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳು ನಿರ್ಮಾಣಗೊಂಡಿವೆ. ಪೋತ್ನಾಳ್ ಸಾರ್ವಜನಿಕ ಆಸ್ಪತ್ರೆಗೆ 3 ಕೋಟಿ, ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ 6 ಕೋಟಿ, ಸಿರವಾರ ಸರ್ಕಾರಿ ಆಸ್ಪತ್ರೆಗೆ 3 ಕೋಟಿ ಹಾಗೂ ಮಾನ್ವಿ ಅರ್ಬನ್ ಆಸ್ಪತ್ರೆಗೆ 3 ಕೋಟಿ ರೂ. ಸೇರಿ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
76 ವಿತರಣಾ ಕಾಲುವೆ ಭಾಗದ ರೈತರಿಗೆ ಅನುಕೂಲವಾಗುವಂತೆ 109.45 ಕೋಟಿ ರೂ. ವೆಚ್ಚದಲ್ಲಿ ಯಡಿವಾಳ ಏತ ನೀರಾವರಿ ಯೋಜನೆ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. 85 ಮತ್ತು 89 ನೇ ಡಿಸ್ಟ್ರಿಬ್ಯೂಟರಿ ಕೆಳಭಾಗದ ರೈತರ ಹಿತದೃಷ್ಟಿಯಿಂದ ಸಹ ನೀರಾವರಿ ಯೋಜನೆ ರೂಪಿಸುವ ಚಿಂತನೆ ಸರ್ಕಾರದ ಮುಂದೆ ಇದೆ. ದದ್ದಲ್ ಮತ್ತು ಮದ್ಲಾಪುರ ಏತ ನೀರಾವರಿ ಯೋಜನೆಗಳಿಗೆ ಮರು ಟೆಂಡರ್ ಮೂಲಕ 50 ಕೋಟಿ ರೂ. ವೆಚ್ಚದಲ್ಲಿ 3,500 ಎಕರೆ ಪ್ರದೇಶಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಚೀಕಲಪರ್ವಿ ಮತ್ತು ಚಿಕ್ಕಮಂಚಾಲಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೆಜ್ ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತವಾಗಿದ್ದು, ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಗಳೊಂದಿಗೆ ಮಾತುಕತೆ ನಂತರ ಕಾರ್ಯಾರಂಭವಾಗಲಿದೆ ಎಂದು ಹೇಳಿದರು.
ಮಾನ್ವಿ ಪುರಸಭೆಯನ್ನು ನಗರಸಭೆಯನ್ನಾಗಿ ಹಾಗೂ ಸಿರವಾರ ಪಟ್ಟಣ ಪಂಚಾಯತನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ. ಮಾನ್ವಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯನ್ನು ಆರು ಪಥವಾಗಿ ಅಗಲೀಕರಣ ಮಾಡಲಾಗುವುದು. ಪ್ರವಾಸಿ ಮಂದಿರದಿಂದ ಕೋನಾಪುರಪೇಟೆವರೆಗೆ ಚರಂಡಿ ನಿರ್ಮಿಸಿ ಮದ್ಲಾಪುರ ಕ್ರಾಸ್ ವರೆಗೆ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಹಂಪಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲ, ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲಿದ್ ಖಾದ್ರಿ, ಮಹಾಂತೇಶಸ್ವಾಮಿ ರೌಡೂರು, ಸತ್ತಾರ್ ಬಂಗ್ಲೆವಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.







