ರಾಯಚೂರಿನಲ್ಲಿ ಪ್ರತ್ಯೇಕ ನಾಲ್ಕು ಅಗ್ನಿ ಅವಘಡ : ಅಪಾರ ಹಾನಿ

ರಾಯಚೂರು: ನಗರದಲ್ಲಿ ಮೂರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಂದು ಸೇರಿದಂತೆ ಪ್ರತ್ಯೇಕ ನಾಲ್ಕು ಅಗ್ನಿ ಅವಘಡಗಳು ಸೋಮವಾರ ಸಂಜೆ ಸಂಭವಿಸಿವೆ. ಈ ಘಟನೆಗಳಲ್ಲಿ ನಾಯಿಯೊಂದು ಮೃತಪಟ್ಟಿದ್ದು, ಸುಮಾರು 60 ಸಾವಿರ ರೂ. ಮೌಲ್ಯದ ಮೇವು ಸುಟ್ಟುಹೋಗಿದೆ.
ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ನ ಕೆಳಭಾಗದಲ್ಲಿರುವ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮಳಿಗೆಯಲ್ಲಿದ್ದ ಲ್ಯಾಪ್ಟಾಪ್, ಪ್ರಿಂಟರ್, ವೈದ್ಯಕೀಯ ಬಳಕೆಯ ಹತ್ತಿ ಸೇರಿದಂತೆ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಗರದ ಮಾಣಿಕಪ್ರಭು ಬಡಾವಣೆಯ ಮನೆಯೊಂದರಲ್ಲಿ ಇನ್ವರ್ಟರ್ನಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಅದರ ಸುತ್ತಮುತ್ತಲಿನ ವಸ್ತುಗಳಿಗೆ ಹಾನಿಯಾಗಿದೆ. ಆದರೆ, ಹೆಚ್ಚಿನ ನಷ್ಟ ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂತ್ರಾಲಯ ರಸ್ತೆಯ ಸಮೀಪದಲ್ಲಿರುವ ಮತ್ತೊಂದು ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮನೆಯಲ್ಲಿದ್ದ ನಾಯಿಯೊಂದು ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಟ್ರ್ಯಾಕ್ಟರ್ಗೆ ಜೋಡಿಸಿದ್ದ ಟ್ರಾಲಿಯಲ್ಲಿ ಭತ್ತದ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಟ್ರಾಲಿಯಲ್ಲಿದ್ದ ಹುಲ್ಲು ಸಂಪೂರ್ಣ ಸುಟ್ಟುಹೋಗಿದೆ. ಟ್ರಾಲಿಯ ಮೇಲೆ ಕುಳಿತಿದ್ದ ಇಬ್ಬರು ತಕ್ಷಣ ಎಚ್ಚೆತ್ತುಕೊಂಡು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಸುಮಾರು 60 ಸಾವಿರ ರೂ. ಮೌಲ್ಯದ ಮೇವು ನಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






