ಗಬ್ಬೂರು | ಸರಕಾರಿ ಶಾಲೆಗೆ ಮತ್ತೊಂದು ರಸ್ತೆ ನಿರ್ಮಾಣಕ್ಕೆ ವಿರೋಧ: ಗ್ರಾಮಸ್ಥರು–ಕಂದಾಯ ಅಧಿಕಾರಿಗಳ ನಡುವೆ ವಾಗ್ವಾದ

ಗಬ್ಬೂರು: ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮದರಕಲ್ ಗ್ರಾಮದ ಸರ್ಕಾರಿ ಶಾಲೆಗೆ ರಸ್ತೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ.
ಮದರಕಲ್ ಗ್ರಾಮದಲ್ಲಿ ದಾನಿಯೊಬ್ಬರು ನೀಡಿದ ಜಾಗದಲ್ಲಿ ಸರ್ಕಾರಿ ಶಾಲೆ ನಿರ್ಮಿಸಲಾಗಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಶಾಲೆಗೆ ತೆರಳಲು ಶಾಲೆಯ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೂ ಮತ್ತೊಂದು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅವರ ಬಳಕೆಗಾಗಿ ನಿರ್ಮಿಸಲಾಗಿದ್ದ ಶೌಚಾಲಯವನ್ನು ಕೆಲ ತಿಂಗಳ ಹಿಂದೆ ನೆಲಸಮ ಮಾಡಲಾಗಿದೆ. ಅದರ ಪಕ್ಕದಲ್ಲಿ ಬಣವಿ ಹಾಗೂ ತಿಪ್ಪೆ (ಎತ್ತುಗಳ ಸಗಣಿ ಹಾಕುವ ಜಾಗ) ಇದ್ದು, ಅವುಗಳನ್ನು ತೆರವುಗೊಳಿಸಿ ಮತ್ತೊಂದು ರಸ್ತೆ ನಿರ್ಮಿಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಗ್ರಾಮಸ್ಥರಾದ ಈಶಪ್ಪ ಹಾಗೂ ಇತರರು ಮಾತನಾಡಿ, ತಮ್ಮ ಪಟ್ಟಾ ಭೂಮಿಯಲ್ಲಿ ತಿಪ್ಪೆ ಮತ್ತು ಶೌಚಾಲಯ ನಿರ್ಮಿಸಲಾಗಿತ್ತು. ಈಗಾಗಲೇ ರಸ್ತೆ ಇದ್ದರೂ ಮತ್ತೊಂದು ರಸ್ತೆ ನಿರ್ಮಿಸುವ ಮೂಲಕ ದಲಿತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ತಹಶೀಲ್ದಾರ್ ಕಚೇರಿ ಹಾಗೂ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದರೂ, ದುರುದ್ದೇಶದಿಂದ ಮೊದಲು ಶೌಚಾಲಯವನ್ನು ನೆಲಸಮ ಮಾಡಿ, ಈಗ ಅದೇ ಜಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ದೂರಿದರು. ಈಗಾಗಲೇ ಶಾಲೆಗೆ ರಸ್ತೆ ಇರುವಾಗ ಮತ್ತೊಂದು ರಸ್ತೆ ನಿರ್ಮಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಶಾಲೆಯ ಕಾಮಗಾರಿ ಆರಂಭವಾದಾಗಿನಿಂದ ಇದುವರೆಗೆ ಯಾರೂ ಕಾಮಗಾರಿಗೆ ಅಡ್ಡಿಪಡಿಸಿಲ್ಲ. ಆದರೆ, ಈಗಾಗಲೇ ರಸ್ತೆ ಇದ್ದರೂ ಮತ್ತೊಂದು ರಸ್ತೆ ನಿರ್ಮಿಸುವುದು ಸರಿಯಲ್ಲ. ದಲಿತರು ಬಳಸುವ ಜಾಗ, ಶೌಚಾಲಯ ಹಾಗೂ ಬಣವಿಯನ್ನು ತೆರವುಗೊಳಿಸುವ ಕ್ರಮದ ಹಿಂದೆ ದುರುದ್ದೇಶವಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ರಸ್ತೆ ನಿರ್ಮಾಣದ ಭಾಗವಾಗಿ ಪೊಲೀಸರ ಸಮ್ಮುಖದಲ್ಲಿ ಜೆಸಿಬಿ ಬಳಸಿ ಜಾಲಿ ಗಿಡಗಳನ್ನು ತೆರವುಗೊಳಿಸಲಾಯಿತು. ಬಳಿಕ ತಗ್ಗು ಪ್ರದೇಶದಲ್ಲಿ ಕಪ್ಪು ಮಣ್ಣು ಹಾಕುವ ಕಾರ್ಯ ನಡೆಯಿತು. ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಗ್ರಾಮಸ್ಥರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ಮುಂದುವರಿಯಿತು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ನಾಗಮ್ಮ, ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತಿದ್ದು, ಗ್ರಾಮದ ಕೆಲವರು ಅನಗತ್ಯವಾಗಿ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಪಟ್ಟಾ ಭೂಮಿ ಎಂದು ವಾದಿಸುತ್ತಿದ್ದಾರೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅದು ಸರ್ಕಾರಿ ಜಾಗವೆಂದು ನಮೂದಾಗಿದೆ. ಜನರನ್ನು ದಿಕ್ಕು ತಪ್ಪಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ರೀತಿ ವಿರೋಧ ವ್ಯಕ್ತಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.






