ರಾಯಚೂರು| ಗಾಣಧಾಳ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಗಲಾಟೆ, ಪಾದುಕೆ ಕಟ್ಟೆಗೆ ಬೀಗ: 32 ಜನರ ವಿರುದ್ಧ ಪ್ರಕರಣ ದಾಖಲು

ರಾಯಚೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಧಾಳ ಗ್ರಾಮದ ಪಂಚಮುಖಿ ಆಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಗಲಾಟೆ, ಪಾದುಕೆ ಕಟ್ಟೆಗೆ ಬೀಗ ಹಾಕಿದ ಕಾರಣಕ್ಕೆ 32 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವಸ್ಥಾನವಾದ ಪಂಚಮುಖಿ ಗಾಣಧಾಳ ದೇವಸ್ಥಾನದಲ್ಲಿರುವ ಆಂಜನೇಯ್ಯ ಸ್ವಾಮಿ ಪಾದುಕೆ ಕಟ್ಟೆ ಹಾಗೂ ದೇವಸ್ಥಾನಕ್ಕೆ ಹೋಗುವ ಗೇಟ್‌ಗೆ ಡಿ.2ರ ಬೆಳಿಗ್ಗೆ 7.40ರ ಸುಮಾರಿಗೆ ಗಾಣಧಾಳ ಗ್ರಾಮದ ನಾಗರಾಜ ನಾಯಕ, ಶಾಮಾಚಾರ, ಗುರು ಭೀಮಾಚಾರ, ಅನಂತಾಚಾರ, ಭರತೀಶ ಆಚಾರ ಸೇರಿ 32 ಜನರು ಸೇರಿಕೊಂಡು ಬೀಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಣಧಾಳ ಗ್ರಾಮದ ಲಕ್ಷಣ ಎಂಬವರು ನೀಡಿದ ದೂರಿನ ಅನ್ವಯ ಇಡಪನೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಆಂಜನೇಯ್ಯ ಸ್ವಾಮಿ ಪಾದುಕೆ ಕಟ್ಟೆ ಹಾಗೂ ದೇವಸ್ಥಾನಕ್ಕೆ ಹೋಗುವ ಗೇಟ್‌ಗೆ ಬೀಗ ಹಾಕಿರುವ ಬಗ್ಗೆ ಕೇಳಲು ಹೋದ ನನ್ನ ಸಹೋದರ ದುಳ್ಳಯ್ಯನ ಮೇಲೆ ನಾಗರಾಜ ನಾಯಕ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ" ಎಂದು ಲಕ್ಷಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.





