ಪಿಂಜಾರ ನಿಗಮಕ್ಕೆ ಅನುದಾನ ಕೊಡಿ, ಇಲ್ಲವೇ ಶೇ .30 ಅನುದಾನ ಮೀಸಲಿಡಿ : ಹೆಚ್.ಜಲೀಲ್ ಸಾಬ

ಲಿಂಗಸುಗೂರು : ಹಿಂದಿನ ಸರ್ಕಾರದಲ್ಲಿ ಸ್ಥಾಪನೆಯಾಗಿರುವ ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಇರುವ ಅಲ್ಪಸಂಖ್ಯಾತರ ನಿಗಮದ ಅನುದಾನದಲ್ಲಿ ಪಿಂಜಾರ ಸಮುದಾಯಕ್ಕೆ ಶೇ.30 ರಷ್ಟು ಅನುದಾನ ಮೀಸಲಾಗಿಡಬೇಕು ಎಂದು ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್ ಸಾಬ ಒತ್ತಾಯಿಸಿದರು.
ತಾಲೂಕಿನ ಹಟ್ಟಿ ಚಿನ್ನದಗಣಿಯಲ್ಲಿ ಭಾನುವಾರ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಅಲ್ಪಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತವಾಗಿರುವ ಇಸ್ಲಾಂ ಧರ್ಮಾಚರಣೆ ಮಾಡುವ ನದಾಫ್/ ಪಿಂಜಾರರ ಅಭಿವೃದ್ಧಿಗೆ ಸರ್ಕಾರ ಮುಂದಾಗದೇ ಇರುವುದು ದುರಂತ, ಸಚಿವರು, ಶಾಸಕರುಗಳೊಂದಿ ಮೂರಾಲ್ಕು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ, ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದವು. ಇದುವರೆಗೂ ಸ್ಥಾಪನೆಯಾಗಿರುವ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನಾದರೂ ಸಂಸದರು, ಶಾಸಕರು, ಮಾಜಿ ಶಾಸಕರು ನಮ್ಮ ಮನವಿಯನ್ನು ಸರಕಾರದ ಕಿವಿಗೆ ಮುಟ್ಟಿಸಿ ಪಿಂಜಾರರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪಿಂಜಾರ ಸಮುದಾಯದ ಸಮಾಜ ಸೇವಕ ರಾಜ್ ಮೊಹಮ್ಮದ್ ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ನದಾಫ್ / ಪಿಂಚಾರ ಸಂಘದ ವಿಭಾಗೀಯ ಉಪಾಧ್ಯಕ್ಷ ಅಲ್‌ದಾಚ್ ಮಹಿಬೂಬಸಾಬ ಸಂತಕೆಲ್ಲೂರು, ಜಿಲ್ಲಾಧ್ಯಕ್ಷ ಮೌಲಾಸಾಬ ಗಣದಿನ್ನಿ ತಾಲೂಕು ಅಧ್ಯಕ್ಷ ಟಿ.ಅಮೀನುದ್ದೀನ್ ಚಾಂತಾಪೂರ, ಉಪಾದ್ಯಕ್ಷ ಅಮಿನುದ್ದಿನ್ ಬಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ದಟ್ಟಿ ಘಟಕ ಅಧ್ಯಕ್ಷ ಅಡ್ಡಬಾಬಾ, ಮುಖಂಡರಾದ ಅಮ್ಮದ್ ಸೇರ್, ಖಾದರಸಾಬ ಆನೆಹೊಸೂರು, ಯಮನೂರ ನದಾಫ್, ನಬಿರಸೂಲ್, ರದಮಾನ್‌ಸಾಬ, ಖಾಜಾದುಸೇನ್ ಬಂಗಾರಿ, ರಾಜು ನದಾಫ್, ಬಂದೇನವಾಜ, ಮದಬೂಬ, ಖಾಜಾದುಸೇನ್ ಸೇರಿ ನೂರಾರು ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು ಮತ್ತು ಪುರುಷರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.







