ಕನ್ನಡ ಬಲ್ಲವರಿಗೆ ಮಾತ್ರ ಸರ್ಕಾರಿ ಹುದ್ದೆ ಸರಕಾರಿ ಘೋಷಣೆ ಮಾಡಬೇಕು : ಅಶೋಕ್ ಕುಮಾರ್ ಜೈನ್

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುವ ಪರೀಕ್ಷೆಗಳು ಕಾವಾ ಜಾಣ ಮತ್ತು ರತ್ನ ಎನ್ನುವ ಪರೀಕ್ಷೆಗಳನ್ನು ತೇರ್ಗಡೆ ಯಾದವರಿಗೆ ಮಾತ್ರ ಸರ್ಕಾರಿ ಹುದ್ದೆಗೆ ಅರ್ಹರಾಗುತ್ತಾರೆ ಎಂದು ಸರ್ಕಾರ ಘೋಷಣೆ ಮಾಡಿದಾಗ ಮಾತ್ರ ಪ್ರತಿಯೊಬ್ಬರು ಕನ್ನಡವನ್ನು ಕಲಿಯಲು ಮುಂದಾಗುತ್ತಾರೆ ಎಂದು ಕನ್ನಡಪರ ಹೋರಾಟಗಾರ ಅಶೋಕ್ ಕುಮಾರ್ ಸಿ ಕೆ ಜೈನ್ ಅವರು ನುಡಿದರು.
ಹೊಸಮನಿ ಪ್ರಕಾಶನ ರಾಯಚೂರು ಸರ್ಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಅಸ್ಕಿಹಾಳ ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲೆಯ ಮಕ್ಕಳಿಗಾಗಿ ಕನ್ನಡ ಗೀತೆಗಳು ನೃತ್ಯ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಾದ್ಯ ನಡೆಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಮೇಷ್ಟ್ರು ಎಂದೆ ಪ್ರಖ್ಯಾತಿ ಪಡೆದಿರುವ ಸೈಯದ್ ಗೌಸ್ ಮೋಹಿನುದ್ದೀನ್ ಪೀರ್‌ಝಾದೆ ಮಾತನಾಡಿ, ಕನ್ನಡ ಭಾಷೆ ಮನಮನೆಯ ಭಾಷೆಯಾಗಬೇಕು. ವಿದ್ಯಾರ್ಥಿಗಳಿಗೆ ಪ್ರೌಢಾವಸ್ಥೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸಿದರೆ ಮುಂದೆ ಉತ್ತಮ ವ್ಯಕ್ತಿಯನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಕೊಡಬಹುದು ಎಂದರು.
ಹೊಸಮನಿ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು.
ವ್ಯಂಗ್ಯ ಚಿತ್ರ ಕಲಾವಿದರು ಹಾಗೂ ಯುವ ಸಾಹಿತಿ ಈರಣ್ಣ ಬೆಂಗಾಲಿ,ಅಸ್ಕಿಹಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಇದ್ದರು.
ಸುಮಾರು 8 ತಂಡಗಳು ಸೇರಿ 300 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ವಿಜೇತರಿಗೆ ಬಹುಮಾನ ನೀಡಲಾಯಿತು.
ವಿದ್ಯಾರ್ಥಿ ಶ್ರೇಯ ಪ್ರಾರ್ಥಿಸಿದರು. ವೈ.ಕೆ ಯಶೋಧ ಕಾರ್ಯಕ್ರಮ ನಿರುಪಿಸಿದರು. ಸುನಿತಾ ಸಹ ಶಿಕ್ಷಕಿ ವಂದಿಸಿದರು.







