ರಾಯಚೂರು | ಕೃಷ್ಣ, ಭೀಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ; ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆ
ರಾಯಚೂರು: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಹೆಚ್ಚಿದೆ. ಇದರ ಪರಿಣಾಮವಾಗಿ ರಾಯಚೂರು ತಾಲೂಕಿನ ಪ್ರಮುಖ ಸಂಪರ್ಕ ಸೇತುವೆಯಾದ ಗುರ್ಜಾಪುರ ಬ್ರಿಡ್ಜ್-ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ.
ಕೃಷ್ಣಾ ನದಿಯಲ್ಲಿ ಪ್ರಸ್ತುತ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು, ಭೀಮಾ ನದಿಯಲ್ಲಿ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಎರಡೂ ನದಿಗಳ ಸಂಗಮ ಪ್ರದೇಶದಲ್ಲಿ ಹಿನ್ನೀರು ಹೆಚ್ಚಾಗಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಗುರ್ಜಾಪುರದಿಂದ ಯಾದಗಿರಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸಂಪೂರ್ಣ ಬಂದ್ ಆಗಿದ್ದು, ಜನರು ಹಾಗೂ ವಾಹನ ಸವಾರರು ಸೇತುವೆಯ ಬಳಿಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ರೀತಿಯ ಅಪಾಯವನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ನದಿಗಳ ನೀರಿನ ಹರಿವು ಮುಂದುವರಿದಿರುವುದರಿಂದ ಪರಿಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಇದೆ.
ನಾರಾಯಣಪುರ ಅಣೆಕಟ್ಟಿನಲ್ಲಿ ನೀರಿನ ಹೊರಹರಿವು ಹೆಚ್ಚಳ: ಕೆಳಭಾಗದ ಜನರಿಗೆ ಎಚ್ಚರಿಕೆ
ಉಪ್ರೋತ ಜಲಾನಯನ ಪ್ರದೇಶದ ಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಆಲಮಟ್ಟಿ ಅಣೆಕಟ್ಟಿನಿಂದ ಹೆಚ್ಚುತ್ತಿರುವ ಹೊರಹರಿವು ಹಿನ್ನೆಲೆಯಲ್ಲಿ ನಾರಾಯಣಪುರ ಅಣೆಕಟ್ಟಿನಲ್ಲಿ ನೀರಿನ ಒಳಹರಿವು ಹೆಚ್ಚುವ ಸಾಧ್ಯತೆ ವ್ಯಕ್ತವಾಗಿದೆ.ನಾರಾಯಣಪುರ ಅಣೆಕಟ್ಟಿನ ಅಧಿಕಾರಿಗಳ ಪ್ರಕಾರ, ಇಂದು (ಸೆ.28) ಸಂಜೆ 6 ಗಂಟೆಗೆ ಒಳಹರಿವು ಸುಮಾರು 1,25,000 ಕ್ಯೂಸೆಕ್ ಗೆ ತಲುಪುವ ನಿರೀಕ್ಷೆ ಇದೆ. ಹವಾಮಾನದ ಬದಲಾವಣೆ ಹಾಗೂ ಒಳಹರಿವಿನ ಪ್ರಮಾಣದ ಮೇಲೆ ಈ ಅಂಕಿ ಇನ್ನಷ್ಟು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.ಈ ಹಿನ್ನೆಲೆಯಲ್ಲಿ ನದಿಗೆ ಹೊರಹರಿವು ಕ್ರಮೇಣ 1,25,000 ಕ್ಯೂಸೆಕ್‌ಗೆ ಹೆಚ್ಚಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಒಳಹರಿವಿನ ಮುಂದಿನ ಪ್ರವೃತ್ತಿಯನ್ನು ಅವಲಂಬಿಸಿ ಹೊರಹರಿವಿನಲ್ಲಿ ಮತ್ತೆ ಬದಲಾವಣೆ ಸಾಧ್ಯ. ಅಣೆಕಟ್ಟಿನ ಕೆಳಭಾಗದಲ್ಲಿರುವ ಗ್ರಾಮಗಳು, ತೀರ ಪ್ರದೇಶದ ರೈತರು ಮತ್ತು ಮೀನುಗಾರರು ಸಾವಧಾನದಿಂದ ಇರಲು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.









