ಹದ್ದಿನಾಳ: ಭೂಮಾನಂದ ಮನೆಗೆ ಸಚಿವ ಕೆ. ಎಚ್. ಮುನಿಯಪ್ಪ ಭೇಟಿ

ದೇವದುರ್ಗ: ತಾಲೂಕಿನ ಹದ್ದಿನಾಳ ಗ್ರಾಮದ ಬಿಎಸ್ ಪಿ ಮುಖಂಡ, ದಲಿತ ಯುವಕ ಭೂಮಾನಂದ ಅವರ ಮನೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ನೀಡಿದರು.
ಕಳೆದ ತಿಂಗಳು ಸುಂಕೇಶ್ವರ ಹಾಳ ಗ್ರಾಮದ ಹದ್ದಿನಾಳ ಕ್ರಾಸ್ ಬಳಿ ಭೂಮಾನಂದ ಅವರ ಹತ್ಯೆಯಾಗಿತ್ತು. ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದ್ದು, ಕೊಲೆಯಾಗಿ ತಿಂಗಳಾದರೂ ಸಚಿವರು ಆಗಮಿಸಿಲ್ಲ ಎಂದು ದಲಿತಪರ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯಸಿಂಗ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಎಲ್ ಮೂರ್ತಿ ಸೇರಿದಂತೆ ಜಿಲ್ಲೆಯ ನಾಯಕರು ಭೇಟಿ ನೀಡಿ ಸಾಂತ್ವಾನ ನೀಡಿದ್ದರು. ಈಗ ಸಚಿವ ಕೆ.ಎಚ್ ಮುನಿಯಪ್ಪ ಭೇಟಿ ನೀಡಿ ಕುಟುಂಬಸ್ಥರಿಂದ ,ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಎನ್. ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ, ಜಿಲ್ಲಾಧಿಕಾರಿ ಪೂವಿತಾ ಎಸ್, ಎಸ್ ಪಿ ಅರುಣಾಂಗ್ಶುಗಿರಿ ಸೇರಿದಂತೆ ಸಮಾಜದ ಮುಖಂಡರು ಗ್ರಾಮಸ್ಥರು ಪಾಲ್ಗೊಂಡಿದ್ದರು.




