ರಾಯಚೂರು| ಹಟ್ಟಿ ಚಿನ್ನದ ಗಣಿ ಕಂಪೆನಿ ಆಸ್ಪತ್ರೆಯ ಸುಧಾರಣೆ ಸಮಿತಿ ಸಭೆ: ಆಸ್ಪತ್ರೆಗಳ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹ

ಹಟ್ಟಿ, ಮೇ 13: ಹಟ್ಟಿ ಚಿನ್ನದ ಗಣಿ ಕಂಪೆನಿ ಆಸ್ಪತ್ರೆಯ ಗುಣಮಟ್ಟ ಮತ್ತು ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಆಸ್ಪತ್ರೆ ಸುಧಾರಣೆ ಸಮಿತಿ ಸಭೆಯನ್ನು ಬುಧವಾರ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯ ಕಾರ್ಯಾಲಯದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಆರೋಗ್ಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಸುಧಾರಿತವಾಗಿ ಒದಗಿಸಲು ಹಲವು ಮಹತ್ವದ ಶಿಫಾರಸ್ಸುಗಳನ್ನು ಮಂಡಿಸಲಾಯಿತು.
ಆಸ್ಪತ್ರೆಯಲ್ಲಿ ಖಾಯಂ ಫಿಝಿಷಿಯನ್ ಹಾಗೂ ಹೃದ್ರೋಗ ತಜ್ಞರನ್ನು ನೇಮಕ ಮಾಡುವುದು, ತುರ್ತು ಚಿಕಿತ್ಸಾ ಘಟಕ (ಐಸಿಯು) ಸ್ಥಾಪನೆ, ವೆಂಟಿಲೇಟರ್‌ಯುಕ್ತ ಆಂಬುಲೆನ್ಸ್ ಖರೀದಿ, ಉತ್ತಮ ನೈರ್ಮಲ್ಯಯುಕ್ತ ಪರಿಸರ ನಿರ್ಮಾಣ, ಗುಣಮಟ್ಟದ ಔಷಧಿ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಇದೇ ವೇಳೆ ಕಾರ್ಮಿಕರ ತಂದೆ-ತಾಯಿಗಳಿಗೆ ಪ್ರತ್ಯೇಕ ರೆಫರ್ ಚಿಕಿತ್ಸೆ ಸೌಲಭ್ಯ, ಉಚಿತ ಅಂಬುಲೆನ್ಸ್ ವ್ಯವಸ್ಥೆ, ಆಸ್ಪತ್ರೆಯಲ್ಲಿ ಉನ್ನತ ದರ್ಜೆಯ ಸ್ಕ್ಯಾನಿಂಗ್ ಸೌಲಭ್ಯ, ವಾರ್ಡ್‌ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ, ರೋಗಿಗಳು ಮತ್ತು ಸಹಾಯಕರಿಗೆ ಊಟದ ಕೋಣೆ ನಿರ್ಮಾಣ, ಡೇ-ಕೇರ್ ರೋಗಿಗಳಿಗೆ ನೆರಳು ಮತ್ತು ಆಸನ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಲಾಯಿತು.
ಇದಲ್ಲದೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್‌ಗಳು ಮತ್ತು ಗುತ್ತಿಗೆ ಆಧಾರದ ನೌಕರರಿಗೆ ರಿಸ್ಕ್ ಅಲೋವನ್ಸ್ ನೀಡುವುದು, ತುರ್ತು ಚಿಕಿತ್ಸಾ ಘಟಕದಲ್ಲಿ ಡ್ರೈವರ್‌ಗಳಿಗೆ ವಿಶ್ರಾಂತಿ ಕೊಠಡಿ ನಿರ್ಮಿಸುವುದು, ಆರ್.ಓ. ವಾಟರ್ ಫಿಲ್ಟರ್ ಅಳವಡಿಸುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಸಂತ್ ಕುಮಾರ್, ಹಣಕಾಸು ವಿಭಾಗದ ಕಾರ್ಯದರ್ಶಿ ಬಾಬುರಾವ್, ಡಾ. ಸಂತೋಷ ಎನ್., ಡಾ. ಪ್ರಶಾಂತ ನಾವಡಗಿ, ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿ ವೆಂಕೋಬ್ ಮಿಯ್ಯಾಪೂರು, ಸಮಿತಿಯ ಸದಸ್ಯರಾದ ದುರುಗಪ್ಪ, ಫಕ್ರುದ್ದೀನ್, ಸೋಮಣ್ಣ ನಾಯಕ್, ಆಸ್ಪತ್ರೆಯ ಸಿಬ್ಬಂದಿ ಕೃಷ್ಣಾ, ರೇಷ್ಮಾ ಹಾಗೂ ಮಹಮ್ಮದ್ ಉಪಸ್ಥಿತರಿದ್ದರು.






