ಹಟ್ಟಿ | ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ; ಎನ್‌ಟಿಎ ವಿಸರ್ಜನೆಗೆ ಆಗ್ರಹ

ಹಟ್ಟಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಸಿಐಟಿಯು, ಸಿಡಬ್ಲ್ಯುಎಫ್‌ಐ, ಜೆಎಂಎಸ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಹಟ್ಟಿ ಬಸ್ ನಿಲ್ದಾಣ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ರಮೇಶ ವೀರಾಪೂರು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಶಿಕ್ಷಣವನ್ನು ಕಾರ್ಪೊರೇಟ್‌ಗಳ ಲಾಭದ ಸಾಧನವನ್ನಾಗಿ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ವಿಸರ್ಜಿಸಿ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ನೀಟ್ ಅಕ್ರಮದ ಕುರಿತು ತಪ್ಪಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದರೂ, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರಿಸಿಲ್ಲ ಎಂದು ಟೀಕಿಸಿದರು.
ಸಿಐಟಿಯು ಮುಖಂಡ ಮೈನುದ್ದೀನ್ ಮಾತನಾಡಿ, ವಿದ್ಯಾರ್ಥಿಗಳ ಹೋರಾಟ ಕೇವಲ ವಿದ್ಯಾರ್ಥಿಗಳ ಸಮಸ್ಯೆಯಲ್ಲ, ದೇಶದ ಭವಿಷ್ಯವನ್ನು ಕಾಪಾಡುವ ಹೋರಾಟವಾಗಿದೆ. ಶಿಕ್ಷಣದ ಮೇಲಿನ ದಾಳಿಯನ್ನು ಕಾರ್ಮಿಕರು, ರೈತರು ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಗ್ಗಟ್ಟಿನಿಂದ ವಿರೋಧಿಸಬೇಕು. ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಬೆಂಬಲ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಿದರು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಎನ್‌ಟಿಎಯನ್ನು ವಿಸರ್ಜಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯಯುತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ವೆಂಕೋಬ್ ಮಿಯ್ಯಾಪೂರು, ರಮೇಶ ಬಾಬು, ಹನೀಫ್, ವೆಂಕಟೇಶ ಗೋರ್ ಕಲ್, ಫಕೃದ್ದೀನ್, ಗೌಸ್ ಮಿಯ್ಯಾ, ಅಮರೇಶ ಗುರಿಕಾರ್, ಚಂದ್ರಶೇಖರ್ ನೆಲೋಗಿ, ನಿಂಗಪ್ಪ, ದಾವೂದ್, ಶ್ರೀದರ್, ಅಲ್ಲಾಭಕ್ಷ, ಹಾಜಿಬಾಬು, ನಜೀರ್, ಖಾಜಾ ಟೈಲ್ಸ್, ಲಿಂಗರಾಜ್ ಡಿ.ವೈ,, ಮಹಾಂತೇಶ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ), ವನಜಾಕ್ಷಿ, ಸಾಹೀರಾ ಬಾನು, ರಜಿಯಾ, ದುರುಗಮ್ಮ, ಗಾಯತ್ರಿ, ಅಂಬಮ್ಮ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಟನೆಗೆ ಬೆಂಬಲಿಸಿ ಭಾಗವಹಿಸಿದರು.






