ರಾಯಚೂರಿನಲ್ಲಿ ಹೀಟ್ ವೇವ್ ಎಚ್ಚರಿಕೆ: ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ಪಾಲಿಸಲು ಜಿಲ್ಲಾಧಿಕಾರಿ ಸಲಹೆ

ಎಸ್.ಪೂವಿತಾ
ರಾಯಚೂರು ಮೇ.15: ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಎಸ್. ಪೂವಿತಾ ಅವರು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿಸಿ ಗಾಳಿ (ಹೀಟ್ ವೇವ್) ಎಚ್ಚರಿಕೆ ನೀಡಲಾಗಿದ್ದು, ಹೀಟ್ ಸ್ಟ್ರೋಕ್ನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು, ತೆಳುವಾದ ಹತ್ತಿಯ ಬಟ್ಟೆ ಧರಿಸುವುದು, ಬಿಸಿಲಿನಲ್ಲಿ ಹೊರಗೆ ಹೋಗುವಾಗ ಟೋಪಿ, ಕನ್ನಡಕ, ಚಪ್ಪಲಿ ಬಳಸುವುದು, ಮನೆಯಲ್ಲಿ ತಯಾರಿಸಿದ ತಂಪು ಪಾನೀಯಗಳನ್ನು ಸೇವಿಸುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.
ಮಧ್ಯಾಹ್ನ 12ರಿಂದ 3ರವರೆಗೆ ಹೊರಾಂಗಣ ಕೆಲಸಗಳನ್ನು ತಪ್ಪಿಸುವುದು, ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ವಾಹನಗಳಲ್ಲಿ ಬಿಡದಿರುವುದು, ಆಲ್ಕೋಹಾಲ್, ಚಹಾ, ಕಾಫಿ ಸೇವನೆ ಕಡಿಮೆ ಮಾಡುವುದು ಹಾಗೂ ಹಳಸಿದ ಆಹಾರ ಸೇವಿಸದಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ನವಜಾತ ಶಿಶುಗಳು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಹೃದಯ ಮತ್ತು ರಕ್ತದೊತ್ತಡ ಸಮಸ್ಯೆ ಇರುವವರು ವಿಶೇಷ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






