ರಾಯಚೂರಿನಲ್ಲಿ ಭಾರೀ ಮಳೆ: ಸೇತುವೆ ಮೇಲೆ ಹರಿದ ನೀರು; ಸಂಚಾರ ಅಸ್ತವ್ಯಸ್ತ

ರಾಯಚೂರು: ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಗಬ್ಬೂರು ಸಿರವಾರ ಮುಖ್ಯರಸ್ತೆಯ ಮಾರ್ಗ ಮಧ್ಯೆ ಎನ್ ಗಣೇಕಲ್ ಹಳ್ಳದ ಮೇಲೆಯೇ ನೀರು ತುಂಬಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ.
ಗುರುವಾರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ದೇವದುರ್ಗ ತಾಲ್ಲೂಕಿನಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಗಬ್ಬೂರು ಗ್ರಾಮದಿಂದ ಸಿರವಾರ ತಾಲ್ಲೂಕಿಗೆ ತೆರಳುವ ಮುಖ್ಯ ರಸ್ತೆಯ ಎನ್ ಗಣೇಕಲ್ ಗ್ರಾಮದ ಬಳಿ ಸೇತುವೆ ಮುಳುಗಿ ಬಹುತೇಕ ಸಂಚಾರ ತೊಂದರೆ ಉಂಟಾಗಿದೆ.
ರಸ್ತೆಯು ಗಬ್ಬೂರು , ಮಸೀದಾಪುರ, ನಿಲೋಗಲ್, ಎನ್ ಗಣೇಕಲ್ ಮುಖಾಂತರ ಸಿರವಾರ ತಾಲ್ಲೂಕಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುತ್ತಾರೆ. ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡು ಜನರು ನೀರಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮದ ನಿವಾಸಿ ಶಾಂತಕುಮಾರ ಹೊನ್ನಟಗಿ ಹೇಳಿದ್ದಾರೆ.
ಪ್ರತಿ ವರ್ಷ ಈ ಹಳ್ಳ ಉಕ್ಕಿ ಬರುವ ಸಮಸ್ಯೆ ಎದುರಾಗುತ್ತಿದೆ. ಸುತ್ತಮುತ್ತ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಷ್ಟ ಅನುಭವಿಸಿದ್ದಾರೆ. ಸೇತುವೆ ಬಗ್ಗೆ ಹಲವು ಬಾರಿ ಗ್ರಾಮದ ಮುಖಂಡರು ಜಿಲ್ಲಾಧಿಕಾರಿಗೆ, ಶಾಸಕರ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.





