ರಾಯಚೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನಾ ಜಾಥಾ

ರಾಯಚೂರು: ಶಾಲಾ- ಕಾಲೇಜುಗಳ ನವೀಕರಣಕ್ಕೆ ಇರುವ ಗೊಂದಲ ನಿವಾರಿಸಿ ಸರಳೀಕರಣಗೊಳಿಸಬೇಕು. ಅಗ್ನಿ ಸುರಕ್ಷತೆ ಪ್ರಮಾಣಪತ್ರ ಪಡೆಯಲು ಇರುವ ತೊಡಕು ನಿವಾರಿಸಬೇಕು ಎಂಬುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಯಚೂರು ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ರಾಯಚೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ಅನೇಕ ಗೊಂದಲಕಾರಿ ಆದೇಶ ಮಾಡುವ ಮೂಲಕ ಸವಾರಿ ಮಾಡುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಮಸ್ಯೆಗಳ ಸುಳಿಗೆ ಸಿಲುಕಿ ನಡುಗುವಂತಾಗಿದೆ ಎಂದು ಆರೋಪಿಸಿ ಜಿಲ್ಲೆಯ 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಶಾಲಾ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ನಗರದ ಜಿಲ್ಲಾ ಕ್ರೀಡಾಂಗಣದಿಂದ ಬಸವೇಶ್ವರ ರಸ್ತೆಯ ಮಾರ್ಗವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧಿ ನೀತಿ ನಿಯಮಗಳನ್ನು ರೂಪಿಸಿ ದಿನಕ್ಕೊಂದು ಆದೇಶಗಳು ಜಾರಿ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳ ಮಾನ್ಯತ ನವೀಕರಣ ವ್ಯವಸ್ಥೆ ಸರಳೀಕರಣ, ಅಗ್ನಿಶಾಮಕ ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಸುಗಮ ಗೊಳಿಕೆ. ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳ ಮಾನ್ಯತೆ ಮತ್ತು ನವೀಕರಣದಲ್ಲಿ ಸಾಕಷ್ಟು ಗೊಂದಲಗಳುಳ್ಳ ಅಂಶಗಳು ಒಳಗೊಂಡಿರುತ್ತವೆ. ನವೀಕರಣ ವ್ಯವಸ್ಥೆಗಾಗಿ ಇರುವ ಅಂತರ್ಜಾಲದಲ್ಲಿರುವ ಸರಳೀಕರಣಗೊಳಿಸಬೇಕು. ಅನಗತ್ಯ ಕೆಲವು ಅಂಶಗಳನ್ನು ತೆಗೆದುಹಾಕಬೇಕು. ಅಗ್ನಿಶಾಮಕ ಸುರಕ್ಷತೆ ಪ್ರಮಾಣ ಪತ್ರ ಪಡೆಯುವುದು ಬಹಳ ಕಷ್ಟದ ಕೆಲಸವಾಗಿದೆ. ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಪ್ರಮಾಣ ಪತ್ರ ನಿಯಮಿತ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಕೈ ಸೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಲ್ಲಾ ಸೌಕರ್ಯಗಳನ್ನು ನೀಡುವಂತೆ ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತಾನುದಾನಕ್ಕೆ ಒಳಪಡಿಸುವುದು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೀಯರ ಸಿಬ್ಬಂದಿಯವರಿಗೆ ಸರ್ಕಾರದ ಅಡಿಯಲ್ಲಿ ಬರುವ ಸರ್ಕಾರದ ಆರೋಗ್ಯ ವಿಮೆ ಯೋಜನೆಗೋಳಪಡಿಸಬೆಕು ಎಂದು ಆಗ್ರಹಿಸಿದರು.
ಖಾಸಗಿ ಶಾಲಾ ಕಾಲೇಜುಗಳ ಮಾನ್ಯತಾ ನವೀಕರಣ ಸಮಯದಲ್ಲಿ ಈಗಾಗಲೇ ಶಾಲಾ ಕಾಲೇಜು ಕಟ್ಟಡ ಹೊಂದಿರುವ ವಿದ್ಯಾ ಸಂಸ್ಥೆಗಳಿಗೆ ವಿಧಿಸಿರುವ ಭೂ ಪರಿವರ್ತನ ಷರತ್ತನ್ನು ತೆಗೆದುಹಾಕಬೇಕು. ಆರ್.ಟಿ.ಇ. ಕಂತುಗಳ ಹಣವು ಮರುಪಾವತಿ ಆಗುವಲ್ಲಿ ಅತ್ಯಂತ ವಿಳಂಬವಾಗುತ್ತಿದೆ.ವಿಳಂಬಕ್ಕೆ ಇರುವ ಲೋಪದೋಷಗಳನ್ನು ಸರಿಪಡಿಸಿ, ಸಕಾಲಕ್ಕೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದರು.
ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಅನುಕೂಲವಾಗುತ್ತಿದ್ದ ಆರ್.ಟಿ.ಇ. ಇದನ್ನು ಪುನಃ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು. ಕಾಲೇಜುಗಳಿಗೆ ಜಿ.ಎಸ್.ಟಿ. ಹಣವನ್ನು ಪಾವತಿಸುವಂತೆ ವಿಶ್ವವಿದ್ಯಾಲಯಗಳ ಮೂಲಕ ನೀಡಿರುವ ನೋಟೀಸುಗಳನ್ನು ಹಿಂಪಡೆದು ಶಿಕ್ಷಣ ಕ್ಷೇತ್ರವನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಮುಕ್ತಗೊಳಿಸಬೇಕು. ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳು ಪರೋಕ್ಷವಾಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮೇಲೆ ಅನಾವಶ್ಯಕವಾಗಿ ದೌರ್ಜನ್ಯ ನಡೆಸುತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಚುನಾವಣೆ ಮತ್ತು ಸರ್ಕಾರದ ಅವಶ್ಯಕತೆಗನುಗುಣವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನಗಳನ್ನು ಜಿಲ್ಲಾಧಿಕಾರಿಗಳು ಬಳಸಿಕೊಳ್ಳುತ್ತಿದ್ದು ಕೆ.ಎಸ್.ಆರ್.ಟಿ.ಸಿ. ವಾಹನಗಳಿಗೆ ಪಾವತಿಸುವ ರೀತಿಯಲ್ಲಿಯೇ ಬಾಡಿಗೆ ಮತ್ತು ಭತ್ಯೆ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಗೆ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗೇರಿ, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಹಾಗೂ ಪ್ರತಾಪಗೌಡ ಪಾಟೀಲ್ ಮಸ್ಕಿ ಚಾಲನೆ ನೀಡಿದರು.
ಒಕ್ಕೂಟದ ಮುಖಂಡರಾದ ನಾಗರಾಜ ಮಸ್ಕಿ ವಕೀಲರು, ಡಾ. ರಜಾಕ್ ಉಸ್ತಾದ್ , ಪಾರಸಮಲ್ ಸುಖಾಣಿ, ಮಹಮ್ಮದ್ ಎಕ್ಸಾಲ್, ಎಂ.ಕೇಶವರೆಡ್ಡಿ, ಬಸವರಾಜ ಪಾಟೀಲ್ ದರೂರ್, ಮಲ್ಲಪ್ಪ, ರಾಜಾ ಶ್ರೀನಿವಾಸ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಾಥಾ ಜಿಲ್ಲಾ ಕ್ರೀಡಾಂಗಣ ಬಳಿಯ ಏಮ್ಸ್ ಹೋರಾಟ ಸಮಿತಿಯ ವೇದಿಕೆಯಿಂದ ಆರಂಭಿಸಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಬಸ್ ನಿಲ್ದಾಣ, ಮಹಾನಗರ ಪಾಲಿಕೆ ಕಚೇರಿ, ಟಿಪ್ಪು ಸುಲ್ತಾನ್ ಗಾರ್ಡನ್ ಮಾರ್ಗವಾಗಿ ಹಳೆಯ ಡಿಸಿ ಕಚೇರಿವರೆಗೆ ನಡೆಯಿತು.







