ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯದ ಪ್ರಾರಂಭೋತ್ಸವ
30 ಕೋಟಿ ರೂ. ವೆಚ್ಚದ ಕೆರೆ ನಿರ್ಮಾಣಕ್ಕೆ ಸಚಿವರಿಂದ ಶಂಕುಸ್ಥಾಪನೆ

ರಾಯಚೂರು : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯದಡಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ರಾಜ್ಯದ ಎಲ್ಲಾ ಸಮುದಾಯಗಳಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ನೀಡಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಹೇಳಿದರು.
ಜುಲೈ 13ರ ಭಾನುವಾರದಂದು ಜಿಲ್ಲೆಯ ಸಿಂಧನೂರು ನಗರದ ಸತ್ಯ ಗಾರ್ಡನ್ ಫಂಕ್ಷನ್ ಹಾಲ್ ನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯದ ಪ್ರಾರಂಭೋತ್ಸವ ಹಾಗೂ ಸಿಂಧನೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಅಂದಾಜು 30 ಕೋಟಿ ರೂ. ವೆಚ್ಚದ ಕೆರೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಮುಖ್ಯಮಂತ್ರಿಗಳು, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸಣ್ಣ ಸಮುದಾಯಗಳ ಏಳ್ಗೆಗಾಗಿ ಹತ್ತಾರು ಯೋಜನೆಗಳನ್ನು ನೀಡಿದ್ದಾರೆ. ಸಿಂಧನೂರಿನಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣ ಕಾರ್ಯ ಹಮ್ಮಿಕೊಂಡಿದ್ದು, ಇದು ಮುಂದಿನ 30-40 ವರ್ಷಗಳ ಕಾಲ ಸಿಂಧನೂರಿನ ನೀರಿನ ಸಮಸ್ಯೆಯನ್ನು ನೀಗಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅನಧಿಕೃತ ಆಸ್ತಿಗಳಿಗೆ ಎ.ಖಾತಾ, ಬಿ.ಖಾತಾ ನೀಡುವ ಪ್ರಕ್ರಿಯೆ ಶೇ.50 ರಷ್ಟು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯತ್ ಹಂತದಲ್ಲೂ ಖಾತೆ ಕೊಡಲಾಗುತ್ತದೆ. ಈ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ಇಲಾಖೆಗಳಿಂದ ಖಾತೆ ಮಾಡಿಕೊಡುವುದಕ್ಕೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಅಲ್ಲದೇ ಆಯಾ ಜಿಲ್ಲಾಧಿಕಾರಿಗಳಿಗೆ ಮಾನಿಟರಿಂಗ್ ಜವಾಬ್ದಾರಿ ಕೊಡಲಾಗಿದೆ. ಸಿಎಂ ಅವರು ಮನಸ್ಸು ಮಾಡಿದ್ದರಿಂದ ಬಡವರಿಗೆ ಖಾತೆ ಸಿಗುತ್ತಿದ್ದು, ಬ್ಯಾಂಕ್ ಸಾಲ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಸಹಕಾರದಿಂದ ಎರಡು ವರ್ಷ ಅವಧಿಯಲ್ಲಿ ರಾಜ್ಯದಲ್ಲಿ ಎರಡು ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು, ಅದರಲ್ಲಿ ಒಂದು ಸಿಂಧನೂರು ನಗರಾಭಿವೃದ್ದಿ ಪ್ರಾಧಿಕಾರವು ಆಗಿದೆ. ಪ್ರಾಧಿಕಾರದ ಉದ್ದೇಶವು ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿ, ಒಳ್ಳೆಯ ಬಡಾವಣೆ ನಿರ್ಮಾಣ ಮಾಡಿ ಹಂಚಿಕೆ ಮಾಡುವುದಾಗಿದೆ. ಬಡಾವಣೆಯಲ್ಲಿ ನೀರಿನ ವ್ಯವಸ್ಥೆ, ಉದ್ಯಾನದ ವ್ಯವಸ್ಥೆ ಇರಲಿದೆ ಎಂದರು.
ಬೃಹತ್ ಮೆರವಣಿಗೆ :
ಸಿಂಧನೂರಿನ ನೂತನ ನಗರಾಭಿವೃದ್ಧಿ ಪ್ರಾಧಿಕಾರ ಉದ್ಘಾಟನಾ ಹಾಗೂ ಅಧ್ಯಕ್ಷರು, ನಿರ್ದೇಶಕರ ಪದಗ್ರಹಣ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಕಂಡುಬಂದಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ ಅವರಿಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ನಗರದ ನೂತನ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯದವರೆಗೂ ತೆರದ ವಾಹನದ ಮೂಲಕ ಬೃಹತ್ ಮೆರವಣಿಗೆ ಮಾಡಲಾಯಿತು. ಇದಕ್ಕೆ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಕ್ಷಿಯಾದರು.
ಸಚಿವರಿಂದ ನೂತನ ಕಾರ್ಯಾಲಯ ಉದ್ಘಾಟನೆ:
ಸಿಂಧನೂರು ನಗರದ ಅಂಬಾದೇವಿ ದೇವಸ್ಥಾನದ ಹತ್ತಿರದ ಪ್ರಾಧಿಕಾರದ ನೂತನ ಕಾರ್ಯಾಲಯವನ್ನು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಉದ್ಘಾಟನೆ ಮಾಡಿ, ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಶುಭಾಶಯ ಕೋರಿದರು.
ಇದಕ್ಕೂ ಮೊದಲು ಸಿಂಧನೂರು ನಾಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ವೆಂಕನಗೌಡ (ಬಾಬುಗೌಡ ಬಾದರ್ಲಿ) ಅವರು ಕುಟುಂಬ ಸಮೇತ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಸಂಸದರಾದ ಕೆ.ರಾಜಶೇಖರ ಹಿಟ್ನಾಳ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತ ಕುಮಾರ, ಸಿಂಧನೂರು ನಗರಸಭೆಯ ಅಧ್ಯಕ್ಷರಾದ ಮಂಜುಳಾ, ಸಿಂಧನೂರು ನಾಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ವೆಂಕನಗೌಡ (ಬಾಬುಗೌಡ ಬಾದರ್ಲಿ), ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮಮತಾ, ಚಂದ್ರಶೇಖರ ರೆಡ್ಡಿ ಕನಸಾವಿ, ಖಾಜಿ ಮಲ್ಲಿಕ್ ಅಹ್ಮದ್, ವೈ.ನರೇಂದ್ರನಾಥ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅರುಣ್ ಕುಮಾರ್ ದೇಸಾಯಿ, ನಗರಸಭೆಯ ಪೌರಾಯುಕ್ತರಾದ ಶೃತಿ ಸೇರಿದಂತೆ ಇತರರು ಇದ್ದರು.







