ಗ್ಯಾರಂಟಿ’ಗಳಿಗೆ ಹಣ ಹೊಂದಿಸಲು ಮದ್ಯದಂಗಡಿಗಳ ಹೆಚ್ಚಳ : ವಿಜಯೇಂದ್ರ

ವಿಜಯೇಂದ್ರ
ಕೊಪ್ಪಳ : ರಾಜ್ಯದ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯದ ಅಂಗಡಿಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಪರಿಶಿಷ್ಟರ ಕಲ್ಯಾಣಕ್ಕೆ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
ಶನಿವಾರ ಜಿಲ್ಲೆಯ ಕಾರಟಗಿದಲ್ಲಿ ಬಳ್ಳಾರಿ ಚಲೋ ಪಾದಯಾತ್ರೆ ಐದನೇ ದಿನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗಾಗಲೇ ಮೂರು ವರ್ಷ ರಾಜ್ಯವನ್ನು ಹಾಳು ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಸರಕಾರವಿದೆ. ಇದು ಬಡವರು ಮತ್ತು ರೈತ ವಿರೋಧಿ ಸರಕಾರ. ಆಡಳಿತ ಪಕ್ಷದ ಶಾಸಕರೇ ‘ಸರಕಾರ ಇನ್ನೂ ಟೇಕಾಫ್ ಆಗಿಲ್ಲ’ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವಾಗ ರೈತರನ್ನು ಸರಕಾರ ಕೈಬಿಡಬಾರದು. ಮೊದಲು ರಾಜ್ಯ ಸರಕಾರವೇ ರೈತರಿಗೆ ಅಗತ್ಯ ಪರಿಹಾರ ನೀಡಬೇಕು. ಬಳಿಕ ಕೇಂದ್ರ ಸರಕಾರದಿಂದ ಏನು ನೆರವು ಬೇಕೋ ಅದನ್ನು ಪಡೆಯಬಹುದು. ಸಂಕಷ್ಟದಲ್ಲಿರು ಜನರಿಗೆ ನೆರವು ನೀಡದಿದ್ದರೆ ಬಲಿಷ್ಠ ಸರಕಾರ ಎಂದು ಹೇಳಳಲು ಸಾಧ್ಯವೇ?’ ಎಂದು ವಿಜಯೇಂದ್ರ ಹೇಳಿದರು.
ಜನಾಂದೋಲನ :
‘ಬಳ್ಳಾರಿ ಚಲೋ’ ಪಾದಯಾತ್ರೆ ಜನಾಂದೋಲನವಾಗಿ ಪರಿವರ್ತನೆಯಾಗುತ್ತಿದೆ. ಪಾದಯಾತ್ರೆಗೆ ದೊರೆಯುತ್ತಿರುವ ಜನ ಬೆಂಬಲ ಕಂಡು ಸಿಎಂ ಡಿ.ಕೆ.ಶಿವಕುಮಾರ್ ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಮ್ಮ ಹೋರಾಟದ ಪರಿಣಾಮವಾಗಿಯೇ ಸಿಎಂ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ದೊಡ್ಡ ಜಯ ಎಂದು ವಿಜಯೇಂದ್ರ ಹೇಳಿದರು.
ಜಾಹೀರಾತು ಸರಕಾರ :
ಆಡಳಿತಾರೂಢ ಕಾಂಗ್ರೆಸ್ ಸರಕಾರ ಜನಪ್ರಿಯ ಸರಕಾರವಲ್ಲ, ಜಾಹೀರಾತು ಸರಕಾರವಾಗಿದೆ. ಜಾಹೀರಾತು ನೀಡುವುದನ್ನು ಬಿಟ್ಟರೆ ಸರಕಾರದಿಂದ ಬೇರೇನೂ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂ. ಅಕ್ರಮದ ಆರೋಪಗಳ ಬಗ್ಗೆ ಸಿಎಂ ಹಾಗೂ ಸಚಿವರು ಈವರೆಗೆ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು.
ಉತ್ತರ ಕರ್ನಾಟಕಕ್ಕೆ ದೊಡ್ಡ ಕೈಗಾರಿಕೆಗಳನ್ನು ತರಬೇಕು. ಅದು ಸಾಧ್ಯವಾಗದಿದ್ದರೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಶಿಕ್ಷಕರ ನೇಮಕಾತಿ ಮಾಡಬೇಕು. ಶಾಲೆಗಳಿವೆ, ಆದರೆ ಶಿಕ್ಷಕರಿಲ್ಲ. 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿ, ಕೇಂದ್ರದ 5 ಕೆಜಿ ಅಕ್ಕಿಯನ್ನೇ ನೀಡಲಾಗುತ್ತಿದೆ. ರಾಜ್ಯದ ಪಾಲಿನ ಅಕ್ಕಿ ನೀಡುತ್ತಿಲ್ಲ. ಬಿಪಿಎಲ್ ಕಾರ್ಡ್ಗಳನ್ನು ಕಡಿತಗೊಳಿಸುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಬದುಕು ಕಟ್ಟಿಕೊಂಡ ನಿಂಗಮ್ಮ :
ಸ್ವನಿಧಿ ಯೋಜನೆಯಡಿ ಸಣ್ಣ ಉದ್ಯಮ ನಡೆಸುತ್ತಿದ್ದ ನಿಂಗಮ್ಮ ಅವರ ಇಡ್ಲಿ ಅಂಗಡಿಯನ್ನು ಸರಕಾರ ತೆರವುಗೊಳಿಸಿದೆ. ಬೆಂಗಳೂರಿನ ಇಡ್ಲಿ ನಿಂಗಮ್ಮ ಅವರನ್ನು ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೆಚ್ಚಿಕೊಂಡಿದ್ದರು. ಆದರೆ, ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದೆ. ಸಮಾಜದ ಎಲ್ಲ ವರ್ಗದವರೂ ಬೀದಿ ಬದಿ ವ್ಯಾಪಾರವನ್ನು ಅವಲಂಬಿಸಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅವರನ್ನು ತೆರವು ಗೊಳಿಸಿದೆ ಎಂದು ಆರೋಪಿಸಿದರು.






