ಅರ್ಹ ಮತದಾರರ ಹೆಸರು ಕೈಬಿಡದಂತೆ ಸೂಚನೆ : ಯತೀಂದ್ರ ಸಿದ್ದರಾಮಯ್ಯ

ಸಿಂಧನೂರು: ಎಸ್ಐಆರ್‌ಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಯಾವುದೇ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಸೂಚನೆ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಶೇ.80ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಸುಮಾರು 76 ಲಕ್ಷ ಮತದಾರರ ಮ್ಯಾಪಿಂಗ್ ಬಾಕಿಯಿದ್ದು, ಜೂನ್ 19ರವರೆಗೆ ಅವಕಾಶ ನೀಡಲಾಗಿದೆ. ಬಿಎಲ್‌ಒಗಳು ಮನೆಮನೆಗೆ ತೆರಳಿ ಮ್ಯಾಪಿಂಗ್ ಕಾರ್ಯ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
ಕೆಪಿಸಿಸಿ ವತಿಯಿಂದಲೂ ಕಾರ್ಯಾಗಾರಗಳನ್ನು ನಡೆಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, “ಸಂಪುಟ ವಿಸ್ತರಣೆ ಆಗಬೇಕು ಎಂಬುದು ಎಲ್ಲಾ ಶಾಸಕರ ಬೇಡಿಕೆಯಾಗಿದೆ. ಸರ್ಕಾರ ಈಗಾಗಲೇ ಮೂರು ವರ್ಷ ಪೂರೈಸಿದ್ದು, ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ನಡೆದುಕೊಳ್ಳುತ್ತಾರೆ” ಎಂದು ಹೇಳಿದರು.
ಕೆಜೆ ಚಾರ್ಜ್ ನಿವಾಸದಲ್ಲಿ ನಡೆದ ಔತಣಕೂಟ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸಾಧನಾ ಸಮಾವೇಶದ ನಂತರ ಎಲ್ಲರೂ ಔಪಚಾರಿಕವಾಗಿ ಸೇರಿರಬಹುದು. ಅಲ್ಲಿ ನಡೆದ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ್ದು, ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಂತೆ ಸರ್ಕಾರ ನಡೆದುಕೊಂಡಿದೆ. ಇದೇ ಕಾರಣಕ್ಕೆ ನಡೆದ ಆರು ಉಪಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳೇ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯ ಬಳಿಕ ನಾನು ಹೆಚ್ಚಾಗಿ ಏನೂ ಹೇಳುವುದಿಲ್ಲ ಎಂದರು.
“ಯಾರೇ ಪಕ್ಷಕ್ಕೆ ಬಂದರೂ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ. ಕೆ.ವಿರೂಪಾಕ್ಷಪ್ಪ ಹಿರಿಯ ಹಾಗೂ ಅನುಭವಿ ರಾಜಕಾರಣಿ. ಅವರು ಬಂದರೆ ಸ್ವಾಗತಿಸುತ್ತೇವೆ. ಆದರೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ. ಬೇರೆ ಪಕ್ಷದಲ್ಲಿದ್ದರೂ ನಮ್ಮ ವೈಯಕ್ತಿಕ ಸಂಬಂಧ ಉತ್ತಮವಾಗಿದೆ. ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್.ಬಸನಗೌಡ, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್ ಮಲ್ಲದಗುಡ್ಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಲಿಂಗಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
ಬಾದರ್ಲಿ ಮಂತ್ರಿಯಾದರೆ ಸಂತೋಷ :
ಹಂಪನಗೌಡ ಬಾದರ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ನಿರೀಕ್ಷೆ ಜನರಲ್ಲಿದೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. “ಅವರು ಮಂತ್ರಿಯಾದರೆ ನನಗೆ ಬಹಳ ಸಂತೋಷವಾಗುತ್ತದೆ. ಅವರು ನನಗೆ ತಂದೆ ಸಮಾನರು. ನನಗಿಂತ ಹೆಚ್ಚಾಗಿ ಮುಖ್ಯಮಂತ್ರಿಗಳೇ ಅವರಿಗೆ ಬೆಂಬಲ ನೀಡುತ್ತಾರೆ” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.






