ಬೇಡಜಂಗಮರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅಸಂವಿಧಾನಿಕ : ಕಲ್ಯಾಣ ಮಹಾಸ್ವಾಮಿ

ರಾಯಚೂರು : ಇತ್ತೀಚೆಗೆ ವಿಜಯನಗರದಲ್ಲಿ ಜರುಗಿದ ಸರ್ಕಾರದ ಸಾಧನಾ ಸಮಾವೇಶದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೇಡ ಜಂಗಮ ಸಮಾಜದ ಕುರಿತು ಅಸಂಬದ್ಧವಾಗಿ ಮಾತನಾಡಿ, ಸಂವಿಧಾನ ಬದ್ಧವಾಗಿ ನೀಡಿರುವ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ ಎಂದು ತಿಳಿಸಿದ್ದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷ ಕಲ್ಯಾಣ ಮಹಾಸ್ವಾಮಿ ತಿಳಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸುತ್ತಿದ್ದು, ಇದರಿಂದ ಬೇಡಜಂಗಮರು ನ್ಯಾಯಯುತ ಹಕ್ಕು ಪಡೆಯಲು ಸಾಧ್ಯವಿದೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಒಂದು ಸಮಾಜದ ಧ್ವನಿ ಹತ್ತಿಕ್ಕಲು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸದುದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ. 19(1) ಕಾಲಂನಲ್ಲಿ ಬೇಡಜಂಗಮ ಜಾತಿಯ ಉಲ್ಲೇಖವಿದೆ. ಕಾನೂನಾತ್ಮಕವಾಗಿಯೇ ಬೇಡಜಂಗಮ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರಿಸಲಾಗಿದೆ’ ಆದರೆ ಖರ್ಗೆಯವರು ತುಂಬಿದ ಸಭೆಯಲ್ಲಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ವಿಭಾಗೀಯ ಕಾರ್ಯದರ್ಶಿ ಕಿಡಗಣಯ್ಯ ಸ್ವಾಮಿ , ಸುಲೋಚನಾ ಆಲ್ಕೂರು, ಬಸವಯ್ಯಲಿಂಗಯ್ಯಸ್ವಾಮಿ, ಪ್ರಭುಶಾಸ್ತ್ರಿ , ವೀರಯ್ಯಸ್ವಾಮಿ ಆಶಾಪೂರು, ವೀರಯ್ಯಸ್ವಾಮಿ ಸಿರವಾರ , ಈರೇಶಸ್ವಾಮಿ ಉಪಸ್ಥಿತರಿದ್ದರು.





