ರಾಯಚೂರಿನ ಹಟ್ಟಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಭೇಟಿ
ಹಟ್ಟಿ ಗೋಲ್ಡ್ ಮೈನ್ ಕಂಪನಿಯ ನೌಕರರ ಸುರಕ್ಷತೆಗೆ ಗಮನ ಹರಿಸಿ : ಟಿ.ಎ.ಶರವಣ

ರಾಯಚೂರು : ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂ.11ರಂದು ಲಿಂಗಸೂರು ತಾಲೂಕಿನ ಹಟ್ಟಿ ಗೋಲ್ಡ್ ಮೈನ್ ಕಂಪನಿಗೆ ಭೇಟಿ ನೀಡಿತು.
ಪೂರ್ವ ನಿಗದಿಯಂತೆ ತಂಡವು ಮೊದಲಿಗೆ ಹಟ್ಟಿ ಚಿನ್ನದ ಗಣಿ ವೀಕ್ಷಣೆಯನ್ನು ನಡೆಸಿತು. ಬಳಿಕ ಚಿನ್ನದ ಗಣಿಯ ಲೋಹ ವಿಭಾಗಕ್ಕೆ ತೆರಳಿ ವೀಕ್ಷಣೆ ನಡೆಸಿದರು.
ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕರಾದ ವಿಧಾತ್ರಿ ಅವರು, ಚಿನ್ನ ಸಂಸ್ಕರಣೆಯ ವಿಧಿವಿಧಾನಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಬಳಿಕ ಕಂಪನಿಯ ಸಭಾಂಗಣದಲ್ಲಿ ಸಭೆ ನಡೆಯಿತು. ಈ ವೇಳೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಭರವಸೆಗಳ ಸಂಖ್ಯೆ: 7622 ಮತ್ತು 7387ಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆದುಕೊಂಡರು.
ಕಂಪನಿಯ ನೌಕರರೊಬ್ಬರು ಮೃತಪಟ್ಟ ವಿಷಯದ ಬಗ್ಗೆ ಅಧ್ಯಕ್ಷರು ವಿವರಣೆ ಕೇಳಿದರು. ಕಂಪನಿಯಲ್ಲಿ ಪ್ರಗತಿ ಕಾರ್ಯ ನಡೆಯುವ ವೇಳೆ ಮಸೀನದಲ್ಲಿದ್ದ ಒಬ್ಬ ವ್ಯಕ್ತಿಯು ಪ್ರಾಣ ಕಳೆದುಕೊಂಡರು. ಇವರ ಕುಟುಂಬದವರಿಗೆ ಈಗಾಗಲೇ 5 ಲಕ್ಷ ರೂ ಪರಿಹಾರ ನೀಡಿಲಾಗಿದೆ. ಮೃತನ ಪತ್ನಿಗೆ ಮ್ಯಾನೇಜರ್ ದರ್ಜೆಯ ಹುದ್ದೆಯ ಕೆಲಸ ಕೊಡಲು ಕ್ರಮವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಸಮಿತಿಯ ಅಧ್ಯಕ್ಷರಾದ ಟಿ.ಎ.ಶರವಣ ಅವರು ಮಾತನಾಡಿ, ಇನ್ನು ಮಂದೆ ಇಂತಹ ಕಹಿ ಘಟನೆಗಳು ಮರುಕಳಿಸದ ಹಾಗೆ ಹಟ್ಟಿ ಗೋಲ್ಡ್ ಮೈನ್ ಕಂಪನಿ ನಿಯಮಿತದ ನೌಕರರ ಜೀವ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಪರಿಹಾರ ಧನ 25 ಲಕ್ಷಕ್ಕೆ ಏರಿಸಿ :
ಕಂಪನಿಯಲ್ಲಿ ಕೆಲಸದ ವೇಳೆ ಪ್ರಾಣ ಕಳೆದುಕೊಂಡ ನೌಕರರ ಕುಟುಂಬದ ಸಂತ್ರಸ್ತರಿಗೆ ಇನ್ನು ಮುಂದೆ ಕನಿಷ್ಟ 25 ಲಕ್ಷ ರೂ. ಪರಿಹಾರ ಧನ ನೀಡಲು ಕರ್ನಾಟಕ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಸೂಚನೆ ನೀಡುತ್ತಿದೆ. ಸಭೆಯಲ್ಲಿ ಚರ್ಚೆಯಾಗಿದೆ ಎಂದು ಉಲ್ಲೇಖಿಸಿ 25 ಲಕ್ಷ ರೂ. ಕೊಡಲು ಬೋರ್ಡ್‌ಗೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ಸಮಿತಿಯ ಸದಸ್ಯರು ಇದೆ ವೇಳೆ ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ನಿರಾಣಿ ಹನುಮಂತಪ್ಪ ರುದ್ರಪ್ಪ, ಪ್ರತಾಪ ಸಿಂಹ ನಾಯಕ ಕೆ., ಡಿ ಎಸ್ ಅರುಣ, ಕೆ.ಎಸ್.ನವೀಣ, ಮಂಜುನಾಥ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ, ಪೊಲೀಸ್ ಇಲಾಖೆಯ ಸಿಪಿಐ ರಾಮಪ್ಪ ಜಲ್ದೆ ಸೇರಿದಂತೆ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಹಟ್ಟಿ ಗೋಲ್ಡ್ ಮೈನಿಂಗ್ ಕಂಪನಿಯ ಅಧಿಕಾರಿಗಳು ಇದ್ದರು.