ಕಸಾಪ ಜಿಲ್ಲಾಧ್ಯಕ್ಷರಿಂದ ನಿಯಮ ಉಲ್ಲಂಘನೆ : ಅಣ್ಣಪ್ಪ ಮೇಟಿಗೌಡ ಆರೋಪ

ರಾಯಚೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಬೈಲಾದ ನಿಯಮ ಉಲ್ಲಂಘನೆ ಮಾಡಿ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅವರು ಸೃಷ್ಟಿಸಿರುವ ಗೊಂದಲ ಸರಿಪಡಿಸದಿದ್ದರೆ ನವೆಂಬರ್1ರಂದು ಕನ್ನಡ ಭವನದ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ ಮೇಟಿಗೌಡ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಣ್ಣಪ ಮೇಟಿಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಯವರು ಸಾಹಿತ್ಯ ಪರಿಷತ್ ಬೈಲ್ ನಿಯಮ ಉಲ್ಲಂಘಿಸಿ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿರುವುದನ್ನು ಕೇಂದ್ರ ಸಮಿತಿ ರದ್ದುಗೊಳಿಸಿದ್ದರೂ ಅದೇ ಪದಾಧಿಕಾರಿಗಳನ್ನು ಮುಂದುವರೆಸಿ ಯಾವುದು ಸರಿ ಎಂಬ ಗೊಂದಲ ಸೃಷ್ಟಿಗೆ ಕಾರಣವಾಗಿದ್ದಾರೆ.
ಈ ಬಗ್ಗೆ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಷಿಯವರನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಈ ಕುರಿತು ಸೆಪ್ಟಂಬರ್ 22ರಂದು ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಯವರಿಗೆ ಪತ್ರ ಬರೆದು ನೀವು ನೀಡಿರುವ ಆದೇಶಕ್ಕೆ ಮಾನ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಜಿಲ್ಲಾಧ್ಯಕ್ಷರು ಹೊಸ ಆಯ್ಕೆಯನ್ನು ರದ್ದುಗೊಳಿಸಿಲ್ಲ. ಇದು ಸಾಹಿತ್ಯ ಪರಿಷತ್ ಅಜೀವ ಸದಸ್ಯರು ಹಾಗೂ ಕನ್ನಡ ಮನಸ್ಸುಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ನಿಷ್ಕ್ರಿಯತೆಯಿಂದಲೇ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯದಂತಾಗಿ ಸಮ್ಮೇಳನಗಳು ಸಹ ನಡೆಯುತ್ತಿಲ್ಲ. ಹಂಗಾಮಿ ಅಧ್ಯಕ್ಷರನ್ನು ಸಹ ನೇಮಿಸಲು ಸಾಹಿತ್ಯ ಪರಿಷತ್ ಬೈಲಾದಲ್ಲಿ ಅವಕಾಶವಿಲ್ಲ. ಆದರೆ ಸಾಹಿತ್ಯಪರಿಷತ್ ಬೈಲ್ ಉಲ್ಲಂಘಿಸಿ ನಿಯಮ 32/3 ಪ್ರಕಾರ ಅನುಮೋದನೆಯಿಲ್ಲದೆ ತಾಲೂಕು ಪದಾಧಿಕಾರಿಗಳು ಅಧಿಕಾರ ಪದಗ್ರಹಣ ಮಾಡುತ್ತಿರುವುದು ಹಳೆ ಪದಾಧಿಕಾರಿಗಳಲ್ಲಿ ಮುಜುಗರು ಉಂಟು ಮಾಡಲು ಕಾರಣವಾಗಿದೆ. ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಯವರು ಕನ್ನಡ ಕೆಲಸಕ್ಕೆ ಸಹಕರಿಸಬೇಕು. ತಮ್ಮಿಂದ ಆಗದೇ ಇದ್ದರೆ ರಾಜೀನಾಮೆ ನೀಡಿ ಇತರೆ ಪದಾಧಿಕಾರಿಗಳಿಂದಾದರೂ ಕನ್ನಡ ಕೆಲಸ ಮಾಡಲು ಅವಕಾಶ ನೀಡಬೇಕು. ಈ ಎಲ್ಲ ಗೊಂದಲ ಸಾಹಿತ್ಯಾಸಕ್ತರಲ್ಲಿ ಬೇಸರ ಮೂಡಿಸಲು ಕಾರಣವಾಗಿದೆ. ಕೂಡಲೇ ಸಮಸ್ಯೆ ಪರಿಹಾರವಾಗದೆ ಇದ್ದರೆ ರಾಜ್ಯೋತ್ಸವದಂದು ಪ್ರತಿಭಟನೆ ನಡೆಸುವುದಾಗಿ ಅಣ್ಣಪ ಮೇಟಿಗೌಡ ಹೇಳಿದರು.
ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ ಇದ್ದರು.







