ಜು.21ರಂದು ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ : ಚಾಮರಸ ಮಾಲಿ ಪಾಟೀಲ್

ರಾಯಚೂರು : ಕೊಪ್ಪಳದ ಬಲ್ಡೋಟಾ ಕಂಪನಿಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯಬೇಕು, ಬಸಾಪುರ ಕೆರೆಯ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಜುಲೈ 21ರಂದು ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ–ನವಲಗುಂದ ರೈತ ಬಂಡಾಯಕ್ಕೆ 46 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಕೊಪ್ಪಳದ ಬಲ್ಡೋಟಾ ಕಂಪನಿ ಗೇಟ್ ಎದುರು ಬೆಳಿಗ್ಗೆ 11 ಗಂಟೆಗೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ರೈತ ಮಹಿಳೆಯರು, ಯುವಕರು ಹಾಗೂ ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಹೊಸ ಆರ್ಥಿಕ ನೀತಿಗಳು, ಉದಾರೀಕರಣ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ರೈತ ಸಮುದಾಯದ ಉಳಿವಿಗಾಗಿ ಸರಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.
ಕೊಪ್ಪಳ–ಭಾಗ್ಯನಗರ ಭಾಗದ ಸುಮಾರು 1.5 ಲಕ್ಷ ಜನರ ಆರೋಗ್ಯಕ್ಕೆ ಬಲ್ಡೋಟಾ ಕಂಪನಿ ಅಪಾಯಕಾರಿಯಾಗಿದ್ದು, ಧೂಳು ಮಾಲಿನ್ಯದಿಂದ 22 ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷದ ಫೆಬ್ರವರಿಯಿಂದ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿದ್ದು, ಸರಕಾರ ಮಾಲಿನ್ಯಕಾರಿ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸಾಪುರ ಗ್ರಾಮದ 44 ಎಕರೆ 35 ಗುಂಟೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಖಾಸಗಿ ಕಂಪನಿಗೆ ನೀಡಿರುವುದನ್ನು ಖಂಡಿಸಿದ ಅವರು, ಕೆರೆಯ ಸುತ್ತ ಕಂಪೌಂಡ್ ನಿರ್ಮಿಸಿ ಸಾರ್ವಜನಿಕರ ಪ್ರವೇಶಕ್ಕೆ ಅಡ್ಡಿಪಡಿಸಲಾಗಿದೆ. ಈ ಅಕ್ರಮವನ್ನು ತೆರವುಗೊಳಿಸಿ ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಬರಗಾಲ ಘೋಷಣೆ ಮಾಡಿ – ಎನ್‌ಡಿಆರ್‌ಎಫ್ ಅನುದಾನ ಹೆಚ್ಚಿಸಿ :
ರಾಜ್ಯದ ಹಲವು ಭಾಗಗಳಲ್ಲಿ ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳು ಹಾನಿಯಾಗಿದ್ದು, ಸರಕಾರ ಕೂಡಲೇ ಮುಂಗಾರು ಬರಗಾಲ ಘೋಷಿಸಬೇಕು. ಎನ್‌ಡಿಆರ್‌ಎಫ್ ಪರಿಹಾರ ಅನುದಾನವನ್ನು ಹೆಚ್ಚಿಸಿ ರೈತರಿಗೆ ತಕ್ಷಣ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.






