ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿ ನೀಡದೇ ಬಲಾಢ್ಯ ಸಮಾಜಗಳಿಗೆ ಮಣೆ : ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಖಂಡನೆ

ರಾಯಚೂರು: ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ಆಧಾರದ ಮೇಲೆ ನಾಗಮೋಹನ್ ದಾಸ್ ವರದಿಯಲ್ಲಿ ಶೇ.1 ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ನಿರ್ಣಯದಿಂದ ಅನ್ಯಾಯ ಮಾಡಿದ್ದಾರೆ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಮುಖಂಡ ಎಂ.ಗಂಗಾಧರ್ ಆರೋಪಿಸಿದರು.
ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ದತ್ತಾಂಶ ಸಂಗ್ರಹಿಸಿದ ನ್ಯಾ.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವು ಅಲೆಮಾರಿ ಜಾತಿಗಳ ಜನರಿಗೆ ಪ್ರತ್ಯೇಕ ಗುಂಪು ಸೃಷ್ಟಿಸಿ, ಶೇ.1ರಷ್ಟು ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರಕಾರವು ಈ ಶಿಫಾರಸು ಕಡೆಗಣಿಸಿ ಬಲಾಢ್ಯ ಜಾತಿಗಳ ಮತ ಸೆಳೆಯಲು ಅವುಗಳಿಗೆ ಸಿಂಹಪಾಲು ನೀಡಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
''ಒಳಮೀಸಲಾತಿ ಹಂಚುವಾಗ ಅಲೆಮಾರಿ ಜಾತಿಗಳನ್ನು ಬಲಾಢ್ಯ ಸಮುದಾಯಗಳ ಗುಂಪಿನಲ್ಲಿ ಸೇರಿಸಲಾಗಿದೆ. ಆ ಗುಂಪಿನಲ್ಲಿರುವ ಸಮುದಾಯಗಳ ಜನರು ಅಕ್ಷರಸ್ಥರಾಗಿದ್ದಾರೆ. ಆದರೆ, 49 ಜಾತಿಗಳ ಅಲೆಮಾರಿಗಳಿಗೆ ಇನ್ನು ಅಕ್ಷರ ಜ್ಞಾನವೇ ಇಲ್ಲವಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಅಲೆಮಾರಿಗಳು ಆ ಸಮುದಾಯಗಳ ಜನರೊಂದಿಗೆ ಪೈಪೋಟಿ ನಡೆಸಿ ಮೀಸಲು ಪಡೆಯುವುದು ಕಷ್ಟ ಸಾಧ್ಯ ಎಂದು ಪ್ರಶ್ನಿಸಿದರು.
ರಾಜಕೀಯ, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನ ಮರೀಚಿಕೆಯಾಗಲಿದೆ. ರಾಜ್ಯ ಸರಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು'' ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದರು.







