ವಿಧಾನ ಪರಿಷತ್ ಚುನಾವಣೆ: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶರಣಪ್ಪ ಮಟ್ಟೂರಿಗೆ ಕಾಂಗ್ರೆಸ್‌ನಿಂದ ಟಿಕೆಟ್

ರಾಯಚೂರು: ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಮಂಗಳವಾರ ಘೋಷಿಸಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಮಸ್ಕಿ ತಾಲೂಕಿನ ಶರಣಪ್ಪ ಮಟ್ಟೂರು ಅವರನ್ನು ಮೂರನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಳೆದ ಅವಧಿಯಲ್ಲಿಯೂ ಇದೇ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಪರಿಣಾಮಕಾರಿ ಕಾರ್ಯವೈಖರಿಯಿಂದ ಶಿಕ್ಷಕರ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಅವರ ಸಾಧನೆಯನ್ನು ಗುರುತಿಸಿ ಪಕ್ಷ ಮತ್ತೊಮ್ಮೆ ಅವರಿಗೆ ಮಣೆ ಹಾಕಿದೆ.
ಅವಿಭಜಿತ ಲಿಂಗಸುಗೂರು ತಾಲೂಕಿನ ಮಟ್ಟೂರು ಗ್ರಾಮದ ಕೃಷಿಕ ಕುಟುಂಬದಿಂದ ಬಂದ ಶರಣಪ್ಪ ಮಟ್ಟೂರು ಅವರು, ಕಾನೂನು ಪದವಿ ಪಡೆದು ವಕೀಲ ವೃತ್ತಿಯನ್ನು ಆರಂಭಿಸಿದರು. ಸುಮಾರು 25 ವರ್ಷಗಳ ಕಾಲ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಬಂದ ಅವರು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯರಾಗಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯ ಗಳಿಸಿದ್ದ ಅವರು, ಡಿವಿಜನ್‌ಗೆ ಒಂದು ಪ್ರೌಢಶಾಲೆ ಮಂಜೂರು ಮಾಡಿಸುವುದು, ಶಿಕ್ಷಕರ ಹಾಗೂ ಉಪನ್ಯಾಸಕರ ಸಮಸ್ಯೆಗಳ ಪರಿಹಾರ, ಮುಖ್ಯೋಪಾಧ್ಯಾಯರ ಬಡ್ತಿ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸುಮಾರು 15 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹೆಸರುಗಳನ್ನು ನೆನಪಿಟ್ಟುಕೊಳ್ಳಬಲ್ಲರು ಎನ್ನುವುದು ಅವರ ಕಾರ್ಯನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಅವರ ಆಪ್ತವಲಯ ಹೇಳುತ್ತದೆ.
ಅವರು ಪ್ರಾಥಮಿಕ ಶಿಕ್ಷಣವನ್ನು ಮಟ್ಟೂರು ಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ಮುದಗಲ್ ಪಟ್ಟಣದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಲಿಂಗಸುಗೂರು ತಾಲೂಕಿನಲ್ಲೂ, ಪದವಿಯನ್ನು ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಹಾಗೂ ಕಾನೂನು ಪದವಿಯನ್ನು ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು 2020ರ ನವಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಶೇ.75 ರಷ್ಟು ಶಿಕ್ಷಕರ ಸಮಸ್ಯೆ ಬಗೆಹರಿಸಿದ್ದೇನೆ, ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದೆ, ಕೋರೊನಾ ಇದ್ದ ಕಾರಣ ಪ್ರಚಾರಕ್ಕೆ ಸ್ವಲ್ಪ ಸಮಸ್ಯೆಯಾಗಿತ್ತು. ಈ ಬಾರಿ ಮತ್ತೊಮ್ಮೆ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು. ನಮ್ಮದೇ ಸರ್ಕಾರ ಇರುವ ಕಾರಣ ಗೆಲುವು ಸಾಧಿಸಲಿದ್ದೇನೆ.
-ಶರಣಪ್ಪ ಮಟ್ಟೂರು







