ರಾಯಚೂರು: ಡಿ.ರಾಂಪೂರ ಗ್ರಾಮದಲ್ಲಿ ಚಿರತೆಯ ಓಡಾಟ; ಆತಂಕದಲ್ಲಿ ಗ್ರಾಮಸ್ಥರು

ರಾಯಚೂರು: ರಾಯಚೂರು ತಾಲೂಕಿನ ಡಿ.ರಾಂಪೂರ (ಡೊಂಗರಾಂಪೂರ) ಗ್ರಾಮದಲ್ಲಿ ಚಿರತೆಯ ಓಡಾಟ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದ ಒಂದು ವಾರದಿಂದ ಡಿ.ರಾಂಪೂರು ಗ್ರಾಮದ ಸುತ್ತುಮುತ್ತಲು ಬೆಟ್ಟದ ಬಳಿ ಓಡಾಡಿದ್ದು ಗ್ರಾಮಸ್ಥರು ಕಂಡು ಆತಂಕಕ್ಕೀಡಾಗಿದ್ದಾರೆ.
ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ರಾಯಚೂರು ವಲಯ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೆಟ್ಟದ ಪರಮೇಶ್ವರ ದೇವಸ್ಥಾನದ ಬಳಿ ಒಂದು ಬೋನು ಹಾಕಿ ಗ್ರಾಮದ ನಾಲ್ಕು ಕಡೆ ಕ್ಯಾಮೆರಾ ಅಳವಡಿಸಿದ್ದಾರೆ.
ಕಳೆದ ಒಂದು ವಾರದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ, ಇದೀಗ ಬೆಟ್ಟದ ಪೊದೆಗಳಲ್ಲಿ ಓಡಾಡಿರುವುದು ಅರಣ್ಯ ಇಲಾಖೆ ಚಿರತೆಯ ಚಲನವಲನದ ಬಗ್ಗೆ ಗಮನಿಸಿದ್ದಾರೆ ಹಾಗೂ ಡ್ರೋನ್ ಕ್ಯಾಮೆರಾದಲ್ಲಿ ಓಡಾಟ ಸೆರೆಯಾಗಿದೆ.
ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ ಅವರು ಮಾತನಾಡಿ, ಚಿರತೆಯ ಓಡಾಟ, ಚಲನವಲನ ಗಮನಿಸಿ ಒಂದು ಬೋನು ಹಾಕಿದ್ದು ಬೋನಿನ ಬಳಿ ಸುಳಿಯುತ್ತಿಲ್ಲ. ಹೀಗಾಗಿ ನಾಳೆ ಇನ್ನೊಂದು ಬೋನು ತಂದು ಮತ್ತೊಂದು ಬದಿಯಲ್ಲಿ ಅಳವಡಿಸಲಾಗುವುದು. ಗ್ರಾಮದಲ್ಲಿ ಬ್ಯಾನರ್ ಹಾಕಿ ಜಾಗೃತಿ ಮೂಡಿಸಲಾಗುತ್ತಿದ್ದು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಬೆಟ್ಟದ ಸುತ್ತಮುತ್ತ ಜನರು ಹಾಗೂ ಜಾನುವಾರುಗಳನ್ನು ಅತ್ತ ಸುಳಿಯದಂತೆ ಮನವಿ ಮಾಡಿದ್ದಾರೆ.





