ಆರೆಸ್ಸೆಸ್ ಮುಖಂಡರು ಮೊದಲು ಸಗಣಿ, ಮೂತ್ರ ಒಂದು ತಿಂಗಳು ಕುಡಿದು ನೋಡಲಿ ಆಮೇಲೆ ಸಾರ್ವಜನಿಕರಿಗೆ ಹೇಳಲಿ: ಕೆ ನೀಲಾ

ರಾಯಚೂರು: ದೇಶ ತುಪ್ಪ ತಿಂದವರಿಂದ ಹಾಳಾಗಿದೆ ಹೊರತು ಮಾಂಸ ತಿಂದವರಿಂದಲ್ಲ ಎಂದು ಪ್ರಗತಿಪರ ಚಿಂತಕಿ ಹಾಗೂ ಹೋರಾಟಗಾರ್ತಿ ಕೆ. ನೀಲಾ ಹೇಳಿದ್ದಾರೆ.
ದೇವದುರ್ಗ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಆಯೋಜಿಸಿದ್ದ ಲಾಠಿ ಬಿಡಿ ಶಿಕ್ಷಣ ಪಡಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ಜನ್ ಕಿ ಬಾತ್ ಮಾತನಾಡುವ ಬದಲು ತನ್ನ ಮನ್ ಕಿ ಬಾತ್ ಮಾತನಾಡುತ್ತಿದ್ದಾರೆ. ದೇಶದ ಯುವಜನತೆ ಉತ್ತಮ ಶಿಕ್ಷಣ, ಉದ್ಯೋಗ ವಿಲ್ಲದೇ ಪರದಾಡಬೇಕಾದರೆ ಬಡ,ಕೂಲಿ ಕಾರ್ಮಿಕರ ಮಕ್ಕಳ ಕೈಯಲ್ಲಿ ಲಾಠಿ ಕೊಟ್ಟು ತಮ್ಮ ಮಕ್ಕಳ ಕೈಲಿ ಸೀಟಿ ಕೊಟ್ಟು ಮುಗ್ಧ ಯುವಕರನ್ನು ದಾರಿ ತಪ್ಪಿಸುವ ಕೆಲಸ ಆರೆಸ್ಸೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಆರೆಸ್ಸೆಸ್ ದೇಶದಲ್ಲಿ ಕೋಮು ಗಲಭೆ, ಹಿಂಸಾಚಾರ, ಗೋರಕ್ಷಣೆ ನೆಪದಲ್ಲಿ ಯುವಕರ ಮೇಲೆ ದೌರ್ಜನ್ಯ, ಅಮಾಯಕರನ್ನು ಬಲಿ ತೆಗೆದುಕೊಳ್ಳುತಿದೆ. ದೇಶದ ಯುವಜನತೆಗೆ ಶಿಕ್ಷಣ, ಉದ್ಯೋಗದ ಅವಶ್ಯಕತೆ ಇದೆ ಹೊರತು ಲಾಠಿ ಅಲ್ಲ. ಹೆಣ್ಣನ್ನು ವ್ಯಭಿಚಾರಿ ಎಂದು ಹೇಳುವ ಇವರ ಸಂಸ್ಕೃತಿ ಹೆಣ್ಣನ್ನು ಗೌರವಿಸುತ್ತಾ? ದೇವದುರ್ಗದ ದಲಿತ, ಹಿಂದುಳಿದ ಯುವಕರ ಕೈಯಲ್ಲಿ ಲಾಠಿ ಕೊಡುವ ಆರೆಸ್ಸೆಸ್ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುವವರೆ ಎಂದು ಪ್ರಶ್ನಿಸಿದರು.
ದೇಶ ಮೋದಿಯಿಂದ ನಡೀತಾ ಇಲ್ಲ ಅಂಬಾನಿ, ಆದಾನಿಗಳ ಕೈಗೊಂಬೆ ಆಗಿದೆ. ದೇಶದ ಜನ ತೆರಿಗೆ ಕಟ್ಟಿ ಒದ್ದಾಡುತಿದ್ದಾರೆ. ಆರೆಸ್ಸೆಸ್, ಬಿಜೆಪಿ ಮುಖಂಡರ ಮಕ್ಕಳು ದೇಶ ವಿದೇಶಗಳಲ್ಲಿ ಮಜಾ ಮಾಡುತ್ತಿದ್ದಾರೆ. ಬಡ, ಕೂಲಿ ಕಾರ್ಮಿಕರ ಮಕ್ಕಳು ಲಾಠಿ ಹಿಡಿದು ಜೈಲು ಸೇರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಂಗಪ್ಪ ಗೋಸಲ್,ಮುಫ್ತಿ ಸಾಬ್, ನರಸಣ್ಣ ನಾಯಕ, ಎಮ್. ಆರ್. ಭೇದಿ,ಮಾನಪ್ಪ ಮೇಸ್ತ್ರಿ, ಫಾದರ್ ಜಾನಪೌಲ, ಅಮಿನ ಬಾಷ, ಮತ್ತಿತರರು ಉಪಸ್ಥಿತರಿದ್ದರು.







