ನ್ಯಾಯಾಂಗ, ಪತ್ರಿಕಾರಂಗ ಬಲಿಷ್ಟಗೊಳಿಸೋಣ: ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸಲಹೆ

ರಾಯಚೂರು : ಮಾಧ್ಯಮ ರಂಗವು ಈಗ ಮೊದಲಿನಂತಿಲ್ಲ, ಹಿಂದಿನವರಂತೆ ವಕೀಲರಲ್ಲೂ ಕೆಚ್ಚು ರೊಚ್ಚು ಕಾಣುತ್ತಿಲ್ಲ. ನಾಡಿನ ಸುರಕ್ಷತೆ ದೃಷ್ಟಿಯಿಂದ ಪತ್ರಿಕಾರಂಗ ಮತ್ತು ನ್ಯಾಯಾಂಗವನ್ನು ಬಲಿಷ್ಟಗೊಳಿಸೋಣ ಎಂದು ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಹೇಳಿದರು.
ಆ.30ರ ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ರಾಯಚೂರು ಹಾಗೂ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ 1988 ರಡಿಯಲ್ಲಿ ವಕೀಲರ ಪಾತ್ರದ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸದ್ಯದ ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆಯ ಬಗ್ಗೆ ಜನರಿಗೆ ವಿಶ್ವಾಸ ಇಲ್ಲದಂತಾಗಿದೆ. ಈ ಬಗ್ಗೆ ವಕೀಲರು ಯೋಚಿಸಬೇಕು. ಜನರಿಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಬರುವ ಹಾಗೆ ವಕೀಲರು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು. ಈ ಆಡಳಿತ ಸುಧಾರಣೆಯಲ್ಲಿ ನಮ್ಮ ಪಾತ್ರ ಇದೆ ಎಂದು ವಕೀಲರು ಮತ್ತು ಪತ್ರಕರ್ತರು ಸಹ ಯೋಚಿಸಬೇಕು. ಅನ್ಯಾಯದ ವಿರುದ್ಧ ಸಿಡಿದೇಳಬೇಕು. ಕಾರ್ಯಾಂಗವನ್ನು ಸರಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸಬೇಕು. ಇರುವುದನ್ನು ಪತ್ರಕರ್ತರು ಬರೆಯಬೇಕು. ನ್ಯಾಯಾಧೀಶರ ಲೇಖನಿ ಬಲಿಷ್ಟವಾಗಬೇಕು ಎಂದು ಉಪ ಲೋಕಾಯುಕ್ತರು ಸಲಹೆ ಮಾಡಿದರು.
ವಕೀಲರಿಗೆ ಹಣದ ವ್ಯಾಮೋಹ ಇರಬಾರದು. ಕಕ್ಷಿದಾರರು 1 ರೂ. ನೀಡಿದರು, ತಮ್ಮ ಕಾರ್ಯವನ್ನು ನಿಷ್ಟೆಯಿಂದ ಮಾಡಬೇಕು. ಹಣ ಪಡೆದು ಕೋರ್ಟಿಗೆ ಹೋದರೆ ಅದು ಮೋಸ ಎಂದು ತಿಳಿಯಬೇಕು. ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಪತ್ರಿಕೆಗಳು ಮತ್ತು ಪತ್ರಕರ್ತರ ಪಾತ್ರವು ಸಹ ಪ್ರಮುಖವಾಗಿತ್ತು. ಇತ್ತೀಚಿನ ದಿನಗಳಲ್ಲಿ ಪತ್ರಿಕಾ ರಂಗವು ದುರ್ಬಲವಾಗುತ್ತಿದೆ. ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಲು ಪತ್ರಿಕಾರಂಗ ಹಾಗೂ ನ್ಯಾಯಾಂಗವು ಬಲಿಷ್ಠವಾಗಬೇಕು ಎಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಎಸ್.ಬಾಗಡೆ, ಕರ್ನಾಟಕ ಲೋಕಾಯುಕ್ತರ ಅಪರ ನಿಬಂಧಕರು ಆಗಿರುವ ನ್ಯಾ.ರಮಾಕಾಂತ್ ಚವ್ಹಾಣ, ಶಿವಾಜಿ ನಾಲವಾಡೆ, ಕರ್ನಾಟಕ ಲೋಕಾಯುಕ್ತರ ಉಪ ನಿಬಂಧಕರು ಮತ್ತು ನ್ಯಾ.ಅರವಿಂದ, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ ಸೇರಿದಂತೆ ವಿವಿಧ ವಿಭಾಗದ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿ ಇದ್ದರು.







