Raichur | ಹಟ್ಟಿ ಚಿನ್ನದ ಗಣಿಯ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ : 2,200 ಅಡಿಯಲ್ಲಿ ಮೂರ್ಛೆ ತಪ್ಪಿದ ಕಾರ್ಮಿಕರು

ಹಟ್ಟಿ, ಎ.2: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸೆಂಟ್ರಲ್ ಶಾಪ್ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಿಫ್ಟ್ ಏಕಾಏಕಿ ಸ್ಥಗಿತಗೊಂಡ ಪರಿಣಾಮ ಕಾರ್ಮಿಕರು ಸುಮಾರು 2:30 ಗಂಟೆಗಳ ಕಾಲ ಒಳಗೆ ಸಿಲುಕಿಕೊಂಡರು.
ಬುಧವಾರ ರಾತ್ರಿ 11:30ರ ಸುಮಾರಿಗೆ ಗಣಿಗೆ ಇಳಿಯುತ್ತಿದ್ದ ವೇಳೆ ಕೇಜ್ 2200 ಅಡಿ ಕೆಳಗಡೆ ಸ್ಥಗಿತಗೊಂಡಿದೆ. ಲಿಫ್ಟ್‌ನ ಕೆಳಭಾಗದಲ್ಲಿ 6 ಮಂದಿ ಹಾಗೂ ಮೇಲ್ಭಾಗದಲ್ಲಿ ಇಬ್ಬರು ಸೇರಿ ಒಟ್ಟು 8 ಕಾರ್ಮಿಕರು ಸಿಲುಕಿಕೊಂಡಿದ್ದರು.
ಲಿಫ್ಟ್ ಒಳಗೆ ಆಕ್ಸಿಜನ್ ಕೊರತೆ ಉಂಟಾಗಿ ಮೂವರು ಕಾರ್ಮಿಕರು ಮೂರ್ಛೆೆ ತಪ್ಪಿದ್ದು, ಇತರರು ಕೂಡಾ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಕುಡಿಯಲು ನೀರು ಸಹ ಇಲ್ಲದೆ ಕೆಲವರು ತಲೆಸುತ್ತಿನಿಂದ ಬಳಲಿದರೆಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ತಿಳಿದ ತಕ್ಷಣ ಎಲೆಕ್ಟ್ರಿಕಲ್ ಸೆಕ್ಷನ್ ಪೋರ್‌ಮನ್‌ಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಾರ್ಟ್ ಸರ್ಕ್ಯೂಟ್ ದುರಸ್ತಿ ಮಾಡಿ ಕೇಜ್ ಅನ್ನು ಯಥಾ ಸ್ಥಿತಿಗೆ ತರಲಾಯಿತು. ಬಳಿಕ ಸಿಲುಕಿದ್ದ ಕಾರ್ಮಿಕರನ್ನು ಮೇಲಕ್ಕೆ ಕರೆ ತಂದು ತಕ್ಷಣ ಆಸ್ಪತ್ರೆಗೆದಾಖಲಿಸಲಾಯಿತು.
ಸುದ್ದಿ ತಿಳಿದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಶಫಿ ಹಾಗೂ ಪದಾಧಿಕಾರಿಗಳಾದ ವೆಂಕೋಬ್ ಮಿಯ್ಯಾಪೂರು, ಗೌಸ್ ಮಿಯಾ, ರಮೇಶ್ ಬಾಬು, ಸಿದ್ದಪ್ಪ ಮುಂಡರಗಿ, ಹನುಮಂತಗೌಡ, ಜಮದಗ್ನಿ, ನಾಗರಾಜ್, ಗುಂಡಪ್ಪಗೌಡ ಮತ್ತು ಚಂದ್ರಶೇಖರ ನೆಲೋಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಘಟನೆಗೆ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದು, ಗಣಿಯಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಆಡಳಿತಕ್ಕೆ ಆಗ್ರಹಿಸಿದ್ದಾರೆ.







