ಲಿಂಗಸುಗೂರು | ಡಿ.21ರಂದು ಪೋಲಿಯೋ ಲಸಿಕೆ ಅಭಿಯಾನ : ತಹಶೀಲ್ದಾರ್ ಸತ್ಯಮ್ಮ

ಲಿಂಗಸುಗೂರು : ತಾಲೂಕಿನಲ್ಲಿ ಡಿ.21ರಂದು ಪೋಲಿಯೋ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದ್ದು, ಅಭಿಯಾನ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ್ ಸತ್ಯಮ್ಮ ಕರೆ ನೀಡಿದರು.
ಪಟ್ಟಣದ ತಹಶೀಲ್ ಕಚೇರಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು. ಕಳೆದ ದಶಕದಿಂದ ದೇಶದಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿಲ್ಲ. ಆದರೆ, ಪಕ್ಕದ ರಾಷ್ಟ್ರಗಳಲ್ಲಿ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೇ ಡಿ.21 ರಂದು ದೇಶದ್ಯಾಂತ ನಡೆಯಲಿರುವ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಶೇ.100 ಗುರಿ ಸಾಧನೆ ಮಾಡಲು ತೀರ್ಮಾನಿಸಲಾಗಿದೆ ಇದಕ್ಕೆ ಪಾಲಕರು ಸಹಕರಿಸಬೇಕು.
ಪಟ್ಟಣ ಪ್ರದೇಶ, ಗ್ರಾಮೀಣ ಪ್ರದೇಶ, ತಾಂಡ, ದೊಡ್ಡಿಗಳು, ಅಲೆಮಾರಿ ಜನವಸತಿ ತಾಣಗಳು, ಬಸ್‌ನಿಲ್ದಾಣ ಸೇರಿ ಆಯಕಟ್ಟಿನ ಜಾಗಗಳಲ್ಲಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕರ್ತರ ತಂಡಗಳು ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ 240 ತಂಡಗಳನ್ನು ರಚಿಸಲಾಗಿದ್ದು, 480 ಕಾರ್ಯಕರ್ತರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. 48 ಜನ ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ತಿಳಿಸಿದರು.
ಈ ವೇಳೆ ಕಂದಾಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸೇರಿ ನಾನಾ ಇಲಾಖೆ ಅಧಿಕಾರಿಗಳು ಇದ್ದರು.







