ಲಿಂಗಸುಗೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿಳಂಬ; ಕೆಕೆಆರ್‌ಟಿಸಿ ಬಸ್ ಜಪ್ತಿ

ರಾಯಚೂರು, ಜ.15: ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಅದನ್ನು ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿ ಬಸ್ಸನ್ನು ಪಟ್ಟಣದ ಬಸ್ ನಿಲ್ದಾಣದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ಮಸ್ಕಿ ತಾಲೂಕಿನ ಪಾಂಡುರಂಗ ಕ್ಯಾಂಪ್ ಸಮೀಪ 2001ರಲ್ಲಿ ಯಾದಗಿರಿ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಉಮೇಶ್ ಎಂಬವರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರು ಪರಿಹಾರಕ್ಕಾಗಿ ಲಿಂಗಸುಗೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ದಾವೆಯನ್ನು ವಿಚಾರಿಸಿದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರು, ರೂ.66,99,675 ಪರಿಹಾರ ಮೊತ್ತ, ರೂ.8,37,450 ಬಡ್ಡಿ ಹಾಗೂ ರೂ.7,525 ಇತರೆ ವೆಚ್ಚ ಸೇರಿ ಒಟ್ಟು ರೂ.75,44,650ನ್ನು ನೀಡುವಂತೆ ಆದೇಶಿಸಿದ್ದರು.
ಆದರೆ ಕೆಕೆಆರ್‌ಟಿಸಿ ಪರಿಹಾರ ಪಾವತಿಯಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಸ್ ಜಪ್ತಿ ವಾರಂಟ್ ಹೊರಡಿಸಿತ್ತು. ಅದರಂತೆ ಕೋರ್ಟ್ ಬೇಲಿಫ್‌ಗಳಾದ ಶಾಂತಪ್ಪ ಹಾಗೂ ಮಾನಪ್ಪ.ಬಿ ಅವರು ಲಿಂಗಸುಗೂರು ಬಸ್ ನಿಲ್ದಾಣಕ್ಕೆ ತೆರಳಿ ಯಾದಗಿರಿ ಘಟಕಕ್ಕೆ ಸೇರಿದ (ಕೆಎ 33 ಎಫ್ 0637) ಬಸ್ಸನ್ನು ವಶಪಡಿಸಿಕೊಂಡು ಲಿಂಗಸುಗೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಈ ವೇಳೆ ವಕೀಲರಾದ ಎಚ್. ವೀರಭದ್ರಪ್ಪ, ಶಿವಕುಮಾರ ಎಸ್., ಮಲ್ಲಿಕಾರ್ಜುನ ಗೋನಾಳ ಹಾಗೂ ರತ್ನಾಬಾಯಿ ಉಪಸ್ಥಿತರಿದ್ದರು.







