ಲಿಂಗಸುಗೂರು | ಹಳೆ ಚರಂಡಿ ತೆರವುಗೊಳಿಸಿ ಹೊಸ ಚರಂಡಿ ನಿರ್ಮಾಣಕ್ಕೆ ಒತ್ತಾಯ

ಲಿಂಗಸುಗೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಹಳೇ ಚರಂಡಿಯನ್ನು ತೆರವುಗೊಳಿಸಿ ಹೊಸ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿ ಹಟ್ಟಿ ಪಟ್ಟಣ ನಾಗರೀಕ ಸಮಿತಿ ಹಾಗೂ ಆಟೋ ಚಾಲಕರ ಸಂಘದ ಕಾರ್ಯಕರ್ತರು ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಈ ಚರಂಡಿ ಸಂಪೂರ್ಣವಾಗಿ ಹಾಳಾಗಿದ್ದು, ಚರಂಡಿಯ ಪಕ್ಕದಲ್ಲೇ ಕುಡಿಯುವ ನೀರಿನ ನಳಗಳು ಇರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಎದುರಾಗಿದೆ. ಪಟ್ಟಣದ ಬಹುತೇಕ ಜನರು ಇದೇ ಸ್ಥಳದಿಂದ ಕುಡಿಯುವ ನೀರನ್ನು ಪಡೆಯುತ್ತಿರುವುದರಿಂದ, ಚರಂಡಿಯಲ್ಲಿ ಹುಳುಗಳ ಕಾಟ ಹೆಚ್ಚಿರುವುದು ಜನರಲ್ಲಿ ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಪರಿಸ್ಥಿತಿಯಿಂದಾಗಿ ಸಾರ್ವಜನಿಕರು ಭಯಭೀತರಾಗಿ ಕುಡಿಯುವ ನೀರು ತೆಗೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಹಳೇ ಚರಂಡಿಯನ್ನು ತೆರವುಗೊಳಿಸಿ ಹೊಸದಾಗಿ ಚರಂಡಿ ನಿರ್ಮಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶಗೌಡ ಗುರಿಕಾರ, ಶಿವಪ್ಪ, ಸದ್ದಾಂ, ಲಾಲ್ ಪೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





