ಲಿಂಗಸುಗೂರು | ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ: ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒತ್ತಾಯಿಸಿ ಮನವಿ

ಲಿಂಗಸುಗೂರು : ಹುಬ್ಬಳ್ಳಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಮರ್ಯಾದಾ ಹೆಸರಿನಲ್ಲಿ ಗರ್ಭಿಣಿ ಯುವತಿಯನ್ನು ಹತ್ಯೆ ಮಾಡಿದ ತಂದೆ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಯುವಕ ವಿವೇಕಾನಂದ ಮೇಲ್ಜಾತಿ ಯುವತಿ ಮಾನ್ಯಾ ಪಾಟೀಲ್ ಪರಸ್ಪರ ಪ್ರೀತಿಸಿ ಪೊಲೀಸರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಯುವತಿಯ ಪೋಷಕರಿಂದ ಜೀವಭಯ ಹಾಗೂ ನಿರಂತರ ಬೆದರಿಕೆ ಇದ್ದ ಹಿನ್ನಲೆಯಲ್ಲಿ ಕೆಲ ತಿಂಗಳ ಹಾವೇರಿಯಲ್ಲಿ ನೆಲೆಸಿದ್ದ ದಂಪತಿಗಳು ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಗ್ರಾಮಕ್ಕೆ ಮರಳಿದ್ದರು.
ಈ ವಿಷಯ ತಿಳಿದ ಯುವತಿಯ ತಂದೆ ಮತ್ತು ಸಂಬಂಧಿಕರು ಸೇರಿ ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ಯುವಕನ ಮನೆಗೆ ನುಗ್ಗಿ, ಯುವಕನ ತಂದೆ, ತಾಯಿ, ತಂಗಿ ಹಾಗೂ ದೊಡ್ಡಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಏಳು ತಿಂಗಳ ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನೆ ಕೊಚ್ಚಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ಮುಖಂಡರಾದ ರುದ್ರಪ್ಪ ಬ್ಯಾಗಿ, ಶಿವಪ್ಪ ಮಾಚನೂರು, ಅಕ್ರಮಪಾಷಾ, ಷಣ್ಮುಖರೆಡ್ಡಿ, ಅಮರೇಶ ಮ್ಯಾಗೇರಿ, ಮೋಹನ್ ಗೋಸ್ಲೆ, ಆದೇಶ ನಗನೂರು, ಆಂಜಿನೇಯ್ಯ ಭಂಡಾರಿ ಮಾಳಪ್ಪ ಗೌಡ, ಹನುಮೇಶ ಕುಪ್ಪಿಗುಡ್ಡ, ಹುಸೇನಪ್ಪ ನಾಯಕ, ಬಾಲರಾಜ ನಾಯಕ, ಪರಶುರಾಮ ಗುಡಿಜಾವೂರು, ಪರಮಾನಂದ ಹಾದಿಮನಿ, ದೇವೇಂದ್ರಪ್ಪ ಹುನಕುಂಟಿ, ಹನುಮಂತ ದೇವದುರ್ಗಾ, ಚಿದಾನಂದ ಕಸಬಾ ಲಿಂಗಸುಗೂರು, ಬಸವರಾಜ ಬಡಿಗೇರ ಸೇರಿ ಇತರರು ಇದ್ದರು.







