ಲಿಂಗಸುಗೂರು | ಪ್ರವಾಹ ಪೀಡಿತ ನಡುಗಡ್ಡೆಯ ಜನರಿಗೆ ತಾಲೂಕು ಆಡಳಿತದಿಂದ ಅಗತ್ಯ ವಸ್ತುಗಳು ಸರಬರಾಜು

ಲಿಂಗಸುಗೂರು : ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದಾಗಿ, ನದಿ ಪಾತ್ರದ ನಡುಗಡ್ಡೆ ಕರಕಲಗಡ್ಡಿ ಸೇರಿದಂತೆ ನದಿಯ ಅಕ್ಕ ಪಕ್ಕ ಗಡ್ಡಿಗಳಲ್ಲಿ ವಾಸವಾಗಿರುವ ಜನರಿಗೆ ತಾಲೂಕು ಆಡಳಿತದಿಂದ ಅಗತ್ಯ ವಸ್ತುಗಳು ಸರಬರಾಜು ಮಾಡಲಾಯಿತು.
ಕರಕಲಗಡ್ಡಿಯನ್ನು ಸುತ್ತುವರೆದ ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡ ಕುಟುಂಬದಲ್ಲಿ ಇಬ್ಬರಿಗೆ ಜ್ವರ ಕಾಣಿಸಿಕೊಂಡ ಪರಿಣಾಮ, ಇಂದು ತಾಲೂಕು ಆಡಳಿತದಿಂದ ವ್ಯವಸ್ಥೆ ಮಾಡಿದ ಸ್ಥಳೀಯ ಬೋಟ್ ನಲ್ಲಿ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಪ್ರತಾಪ್ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಅಲಿ ಅವರು ತೆರಳಿ ಜ್ವರ ದಿಂದ ಬಳಲುತ್ತಿರುವ ದ್ಯಾಮಣ್ಣ(34). ಅನಿತಾ(11) ಇವರಿಗೆ ಚಿಕಿತ್ಸೆ ನೀಡಿದರು.
ಅಲ್ಲದೇ ನಡುಗಡ್ಡೆಯಲ್ಲಿ ವಾಸವಾಗಿರುವ ಇತರ ಐದು ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷದೋಪಚಾರ ಮಾಡಿದರು. ಮುಂಜಾಗ್ರತೆ ಕ್ರಮವಾಗಿ ಅಲ್ಲಿ ಗಡ್ಡೆಗಳಲ್ಲಿ ವಾಸವಾಗಿರುವ ಜನತೆಗೆ ಅಗತ್ಯ ಔಷಧ ನೀಡಲಾಗಿದೆ. ಇವರೊಂದಿಗೆ ಗ್ರಾಮ ಸಹಾಯಕ ಹುಸೇನ್ ಇವರು ತೆರಳಿ ಕಂದಾಯ ಇಲಾಖೆ ವತಿಯಿಂದ ಆಹಾರ ಸಾಮಗ್ರಿಗಳನ್ನು ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಅಮರೇಶ ಪಾಟೀಲ್, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಶಿ, ಅಗ್ನಿ ಶಾಮಕ ತಂಡ ಉಸ್ತುವಾರಿ ವಹಿಸಿದ್ದರು.
ನದಿತೀರದ ಯರಗೋಡಿ, ಯಳಗುಂದಿ, ಕಡದರಗಡ್ಡಿ, ಜಲದುರ್ಗ ಗ್ರಾಮಗಳಿಗೆ ಮುಂದಿನ ಒಂದು ವಾರ ಸತತವಾಗಿ ಸಂಚಾರಿ ಆರೋಗ್ಯ ಘಟಕ ಸೇವೆ ಒದಗಿಸಲಾಗುವುದು. ನಾಗರಿಕರು ಇದರ ಸದುಪಯೋಗ ಪಡಿದುಕೊಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದರು.







