ಲಿಂಗಸುಗೂರು | ಟಿಇಟಿ ಬರೆದು ಮಾಸ್ತರನಾಗಬಹುದು, ಆದರೆ ನಿಜವಾದ ಶಿಕ್ಷಕನಾಗಬೇಕಿದೆ : ಎಫ್.ಸಿ.ಚೇಗರೆಡ್ಡಿ

ಲಿಂಗಸುಗೂರು: ಟಿಇಟಿ ಪರೀಕ್ಷೆ ಬರೆದು ಮಾಸ್ತರನಾಗಬಹುದು, ಆದರೆ ಅದರಿಂದಲೇ ನಿಜವಾದ ಶಿಕ್ಷಕನಾಗುವುದಿಲ್ಲ. ಮಾಸ್ತರನಾಗುವುದಕ್ಕಿಂತ ಸಮಾಜ ರೂಪಿಸುವ ಶಿಕ್ಷಕನಾಗಬೇಕೆಂದು ಟೀಚರ್ ಪತ್ರಿಕೆಯ ಸಹ ಸಂಪಾದಕ ಎಫ್.ಸಿ.ಚೇಗರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಬೆಳ್ಳಿ ಸಂಭ್ರಮೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗೋಷ್ಠಿ–1ರಲ್ಲಿ “ಪ್ರಾಥಮಿಕ ಶಿಕ್ಷಣದಲ್ಲಿನ ಕಲಿಕಾ ತೊಡಕುಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಇಂದಿನ ಶಿಕ್ಷಕರು ಬೋಧನೆಯ ಬದಲು ಮಧ್ಯಾಹ್ನದ ಬಿಸಿಯೂಟದ ಅಂಕಿ–ಅಂಶಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಶಿಕ್ಷಕರು ಶಿಕ್ಷಕರಾಗದೆ ಗುಮಾಸ್ತರಂತೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳು ಮುಚ್ಚಬಾರದು ಎಂದು ಅವರು ಸ್ಪಷ್ಟವಾಗಿ ಹೇಳಿದರು.
“ಕಲಿಕಾರ್ಥಿ ಮತ್ತು ಬೋಧಕನ ಸಾಮಥ್ರ್ಯ ಶೈಕ್ಷಣಿಕ ಮೌಲ್ಯಮಾಪನ” ವಿಷಯದ ಕುರಿತು ಮಾತನಾಡಿದ ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಗದೀಶ ಬಸಾಪೂರು, ಮಕ್ಕಳಲ್ಲಿ ದೋಷವಿಲ್ಲ, ಕಲಿಕಾರ್ಥಿಗಳ ಚಿಂತನೆ ಸರಿಯಾಗಿದೆ. ಆದರೆ ಪೋಷಕರು, ಶಿಕ್ಷಕರು ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿಯೇ ದೋಷಗಳಿವೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಓದುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳನ್ನು ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡಬಾರದು. ಆಟವಾಡುತ್ತಾ ಕಲಿಯುವಂತಹ ಶಿಕ್ಷಣ ವಾತಾವರಣ ನಿರ್ಮಿಸಬೇಕೆಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೇಷ್ಮಾ ಡಿ., ಶಾಂತನಗಡ ಪಾಟೀಲ್, ಸಿದ್ದರಾಮ ಮನಹಳ್ಳಿ, ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಸಂಸ್ಥೆಯ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ, ಭೂಪನಗೌಡ ಕರಡಕಲ್, ಬಸವಂತರಾಯ ಕುರಿ, ಬಸವರಾಜ ಮೇಟಿ, ಪಾಮಯ್ಯ ಮುರಾರಿ ಸೇರಿದಂತೆ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







