Lingsugur | ರೇಷ್ಮೆ ಇಲಾಖೆಯ ಗೋದಾಮಿಗೆ ಬೆಂಕಿ : ದಾಖಲೆ, ಪರಿಕರಗಳು ಬೆಂಕಿಗೆ ಆಹುತಿ

ಲಿಂಗಸುಗೂರು: ಪಟ್ಟಣದಲ್ಲಿರುವ ರೇಷ್ಮೆ ಇಲಾಖೆಯ ಗೋದಾಮಿಗೆ ಶನಿವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಗೋದಾಮಿನಲ್ಲಿದ್ದ ಇಲಾಖೆಯ ಪ್ರಮುಖ ದಾಖಲೆಗಳು, ರೈತರಿಗೆ ವಿತರಿಸಬೇಕಿದ್ದ ವಿವಿಧ ಪರಿಕರಗಳು ಹಾಗೂ ಇತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ನಾಲ್ಕನೇ ಶನಿವಾರದ ರಜೆ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಯಾರೂ ಇರಲಿಲ್ಲ. ಈ ವೇಳೆ ಗೋದಾಮಿನಿಂದ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಬೆಂಕಿ ನಿಯಂತ್ರಣಕ್ಕೆ ತಂದ ಪರಿಣಾಮ ಸುತ್ತಮುತ್ತಲಿನ ಕಟ್ಟಡಗಳಿಗೆ ಬೆಂಕಿ ವ್ಯಾಪಿಸುವುದನ್ನು ತಪ್ಪಿಸಲಾಯಿತು.
ಬೆಂಕಿಯ ತೀವ್ರತೆಗೆ ಗೋದಾಮಿನಲ್ಲಿದ್ದ ಹಲವು ದಾಖಲೆಗಳು, ರೈತರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಕೃಷಿ ಪರಿಕರಗಳು ಹಾಗೂ ಇತರ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿವೆ. ಹಾನಿಯ ನಿಖರ ಪ್ರಮಾಣ ಅಧಿಕಾರಿಗಳ ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆಯ ಬಳಿಕವೇ ತಿಳಿಯಲಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಸಾಧ್ಯತೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ.
ಈ ಅವಘಡದಿಂದ ರೈತರಿಗೆ ವಿತರಿಸಬೇಕಿದ್ದ ಪರಿಕರಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಾನಿಗೊಳಗಾದ ಸಾಮಗ್ರಿಗಳ ಮಾಹಿತಿ ಸಂಗ್ರಹಿಸಿ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸರ್ಕಾರಿ ಗೋದಾಮುಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






