Lingsugur | ಭಾರೀ ಮಳೆ : ಸಿಡಿಲು ಬಡಿದು ರೈತ ಮೃತ್ಯು

ಲಿಂಗಸುಗೂರು : ತಾಲ್ಲೂಕಿನ ಮುದಗಲ್ ಭಾಗದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ರೈತ ಗಾಯಗೊಂಡ ಘಟನೆ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಕರಿಯಪ್ಪ ಅಯ್ಯಪ್ಪ ಗಣಿಕಿಹಾಳ (46) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಸವರಾಜ ಜಗಂಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದ ಹಿಂಭಾಗದಲ್ಲಿ ಟ್ರ್ಯಾಕ್ಟರ್‌ಗೆ ತಿಪ್ಪೆಗೊಬ್ಬರ ತುಂಬುವ ವೇಳೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಡಿಲಿಗೆ ಮೂರು ಮೇವಿನ ಬಣವೆಗಳು ಭಸ್ಮ :
ಮೆಗಳಪೇಟೆ ಗ್ರಾಮದ ರೈತರ ಜಮೀನಿನಲ್ಲಿ ಸಂಗ್ರಹಿಸಿದ್ದ ಜಾನುವಾರುಗಳ ಮೇವು ಹಾಗೂ ವಟ್ಟಿನ ಬಣವಿಗೆ ಸಿಡಿಲು ತಾಗಿದ ಪರಿಣಾಮ ಮೂರು ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬಣವೆಯ ಸಮೀಪದಲ್ಲೇ ರೇಷ್ಮೆ ಶೆಡ್ ಹಾಗೂ ಜಾನುವಾರುಗಳು ಇದ್ದರೂ, ಸ್ಥಳೀಯ ರೈತರು ಸಮಯಪ್ರಜ್ಞೆ ಮೆರೆದು ಬೆಂಕಿ ಹರಡುವುದನ್ನು ತಡೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ.
ಇಲಕಲ್‌ನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಜೀವಹಾನಿ ಹಾಗೂ ಮೇವು ನಷ್ಟಕ್ಕೊಳಗಾದ ರೈತರಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಜನಪರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಕಿಡದೂರು ಒತ್ತಾಯಿಸಿದ್ದಾರೆ.
ಇದೇ ವೇಳೆ ಮುದಗಲ್ ಪಟ್ಟಣ ಸಮೀಪದ ಕನ್ನಾಪೂರಹಟ್ಟಿಯ ಶ್ರೀ ಮಾರುತೇಶ್ವರ ದೇವಸ್ಥಾನದ ಮುಂಭಾಗದಲ್ಲಿದ್ದ ದೊಡ್ಡ ಮೇವಿನ ಮರ ಧರೆಗುರುಳಿದೆ. ಮರವು ಪರಮಯ್ಯ ಎಂಬುವರ ಮನೆಯ ಮೇಲೆಗೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.






