Lingsugur | ಸಂತೆಕಲ್ಲೂರಿನಲ್ಲಿ ‘ಸಣ್ಣ ಗೌಡಶ್ಯಾನಿ’ ನಾಟಕ ಪ್ರದರ್ಶನ
ರಂಗಭೂಮಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಸಿದ್ದು ಯಾಪಲಪರ್ವಿ

ಲಿಂಗಸುಗೂರು: ರಂಗಭೂಮಿಯು ಸಮಾಜದ ನೈಜತೆಯನ್ನು ಬಿಂಬಿಸುವ ಅತ್ಯಂತ ಪ್ರಭಾವಿ ಸಾಹಿತ್ಯ ಮಾಧ್ಯಮವಾಗಿದ್ದು, ಜಾಗತಿಕ ಮಟ್ಟದಲ್ಲಿ ನಾಟಕಗಳಿಗೆ ಅಪಾರ ಬೇಡಿಕೆಯಿದ್ದರೂ ರಾಜ್ಯದಲ್ಲಿ ರಂಗಭೂಮಿಗೆ ನಿರೀಕ್ಷಿತ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಚಿಂತಕ, ಸಾಹಿತಿ ಹಾಗೂ ವಚನ ಟಿವಿ ನಿರೂಪಕ ಸಿದ್ದು ಯಾಪಲಪರ್ವಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಸಂತೆಕಲ್ಲೂರಿನ ಘನಮಠೇಶ್ವರ ಮಠದಲ್ಲಿ ಕಲಬುರಗಿ ರಂಗಾಯಣ ಆಯೋಜಿಸಿದ್ದ ನಾಡೋಜ ಡಾ. ಶಾಂತರಸರ ಕಾದಂಬರಿ ಆಧಾರಿತ ‘ಸಣ್ಣ ಗೌಡಶ್ಯಾನಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶಗಳಲ್ಲಿ ನಾಟಕ ವೀಕ್ಷಿಸಲು ಹಲವು ದಿನಗಳ ಮುಂಚೆಯೇ ಟಿಕೆಟ್ ಕಾಯ್ದಿರಿಸುವಷ್ಟು ರಂಗಭೂಮಿಗೆ ಮಹತ್ವವಿದೆ. ಆದರೆ ನಮ್ಮ ರಾಜ್ಯದಲ್ಲಿ ರಂಗಭೂಮಿಗೆ ಅಷ್ಟೊಂದು ಪ್ರಾಶಸ್ತ್ಯ ಸಿಗದಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿ ಮೈಸೂರು, ಧಾರವಾಡ, ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಗಳ ಮೂಲಕ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನಮ್ಮ ಭಾಗದ ಹೆಮ್ಮೆಯ ಸಾಹಿತಿ ನಾಡೋಜ ಡಾ. ಶಾಂತರಸರು ತಮ್ಮ ‘ಸಣ್ಣ ಗೌಡಶ್ಯಾನಿ’ ಕಾದಂಬರಿಯಲ್ಲಿ ಅಂದಿನ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಅದನ್ನು ಮಹಾಂತೇಶ ನವಲಕಲ್ಲ ಅವರು ರಂಗರೂಪಕ್ಕೆ ತಂದಿದ್ದಾರೆ. ಈ ನಾಟಕ ನಮ್ಮ ನಡುವಿನ ಬದುಕಿನ ನೈಜ ಪ್ರತಿರೂಪವಾಗಿದೆ ಎಂದು ಹೇಳಿದರು.
ಸಾಹಿತಿ ಮಹಾಂತೇಶ ಮಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಂತರಸರ ಕೃತಿಯನ್ನು ಗ್ರಾಮೀಣ ಜನರಿಗೆ ತಲುಪಿಸುವ ಉದ್ದೇಶದಿಂದ ಕಲಬುರಗಿ ರಂಗಾಯಣ ಸಂತೆಕಲ್ಲೂರಿನಲ್ಲಿ ಪ್ರದರ್ಶನ ಆಯೋಜಿಸಿದೆ ಎಂದರು.
ಪ್ರದರ್ಶನಗೊಂಡ ‘ಸಣ್ಣ ಗೌಡಶ್ಯಾನಿ’ ನಾಟಕ ಪ್ರೇಕ್ಷಕರ ಮನಸೂರೆಗೊಳ್ಳುವ ಮೂಲಕ ಉತ್ತಮ ಮೆಚ್ಚುಗೆ ಗಳಿಸಿತು.
ಈ ವೇಳೆ ರಂಗರೂಪ ಮಹಾಂತೇಶ ನವಲಕಲ್, ಸಂಗೀತ ರಾಘವ ಕಮ್ಮಾರ, ನಿರ್ದೇಶನ ಪ್ರವಿರಡ್ಡಿ ಗುಂಜಳ್ಳಿಯವರದಾಗಿತ್ತು ಕಾರ್ಯಕ್ರಮದ ಸಾನಿಧ್ಯವನ್ನು ಗುರುಬಸವ ಮಹಾಸ್ವಾಮಿಗಳು ವಹಿಸಿದ್ದರು. ಮುಖಂಡರಾದ ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಗುರುನಾಥ ರಡ್ಡಿ ದೇಸಾಯಿ, ನಿವೃತ್ತ ಉಪನ್ಯಾಸಕರಾದ ಶರಣಪ್ಪ ಚೀಕಲಪರ್ವಿ, ಸಿ.ಬಿ ಚಿಲ್ಕರಾಗಿ, ಮಹಾಂತೇಶ ಗೌಡರ, ಗುಂಡುರಾವ್ ದೇಸಾಯಿ ಸೇರಿ ಇತರರು ಇದ್ದರು.






