Lingsugur | ಎಸ್‌ಐಆರ್ ರಕ್ತರಹಿತ ನರಮೇಧದ ಪ್ರಕ್ರಿಯೆ: ಶರಣಕುಮಾರ ಮುದ್ದಮ್ಮಗುಡ್ಡಿ ಆರೋಪ

ಲಿಂಗಸುಗೂರು: ಹಿಟ್ಲರ್ ಕಾಲದಲ್ಲಿ ನಡೆದ ನರಮೇಧದ ರೀತಿಯಲ್ಲೇ ಕೇಂದ್ರ ಸರ್ಕಾರ ಎಸ್‌ಐಆರ್ ಜಾರಿಗೆ ತರುತ್ತಿದ್ದು, ಇದು ರಕ್ತರಹಿತ ನರಮೇಧ ನಡೆಸುವ ಪ್ರಕ್ರಿಯೆಯಾಗಿದೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಶರಣಕುಮಾರ ಮುದ್ದಮ್ಮಗುಡ್ಡಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಚುನಾವಣೆಗಳು ನಡೆಯಬಾರದು ಎಂಬ ಕುತಂತ್ರದ ಭಾಗವಾಗಿ ಕೇಂದ್ರ ಸರ್ಕಾರ ಎಸ್‌ಐಆರ್ ಜಾರಿಗೆ ತರುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆ ಮೂಲಕ ಜನಸಾಮಾನ್ಯರ ಹಕ್ಕುಗಳನ್ನು ಕಸಿಯಲಾಗಿದೆ,” ಎಂದು ದೂರಿದರು.
ಮೇ 30ರಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಎಸ್‌ಐಆರ್ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಾತ್ಯತೀತ ಮನೋಭಾವದ ಸಂಘಟನೆಗಳು, ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಮಾಅತ್ ಇಸ್ಲಾಂ ಹಿಂದೆ ಜಿಲ್ಲಾ ಮುಖಂಡ ಅಸೀಮುದ್ದೀನ್ ಅಖ್ತರ್, ದಲಿತ ಮುಖಂಡರು ಭೀಮಣ್ಣ ನಗನೂರು, ಗ್ರಾಕುಸ ಗುಂಡಪ್ಪ ಸೇರಿ ಇತರರು ಇದ್ದರು.




