ಲಿಂಗಸುಗೂರು | ಆಸ್ತಿಗಾಗಿ ತಾಯಿಯನ್ನೇ ಕಲ್ಲು ಎತ್ತಿ ಹಾಕಿ ಕೊಂದ ಮಗ

ಚಂದಮ್ಮ ಮೃತ ಮಹಿಳೆ
ಲಿಂಗಸುಗೂರು: ತಾಲ್ಲೂಕಿನ ಜಕ್ಕರಮಡು ತಾಂಡದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೊಬ್ಬ ತನ್ನ ತಾಯಿಯನ್ನೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.
ಮೃತರನ್ನು ಚಂದಮ್ಮ (50) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅವರ ಪುತ್ರ ಕುಮಾರ್ (30) ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕುಮಾರ್ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದನು. ಕಂಠಪೂರ್ತಿ ಮದ್ಯಪಾನ ಮಾಡಿದ ಕುಮಾರ್, ತಾಯಿಗೆ ಸೇರಿದ ಮೂರು ಎಕರೆ ಆಸ್ತಿಯನ್ನು ತನ್ನ ಪಾಲಿಗೆ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ತಾಯಿ ಚಂದಮ್ಮ ಆಸ್ತಿ ಪಾಲು ಮಾಡಲು ನಿರಾಕರಿಸಿದ್ದರಿಂದ ಕೋಪಗೊಂಡ ಮಗ, ತಾಯಿಯನ್ನು ಕೊಂದರೆ ಆಸ್ತಿ ಸಿಗುತ್ತದೆ ಎಂಬ ದುರುದ್ದೇಶದಿಂದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಚಂದಮ್ಮ ಮೃತಪಟ್ಟ ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆರೋಪಿ ಕುಮಾರ್ನನ್ನು ಬಂಧಿಸಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





