ಅವ್ಯವಹಾರ ಆರೋಪ: ಗಾಣದಾಳ ಗ್ರಾಪಂನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ

ಪ್ರಾತಿನಿಧಿಕ ಚಿತ್ರ (credit: Gemini AI)
ರಾಯಚೂರು: ತಾಲೂಕಿನ ಗಾಣದಾಳ ಗ್ರಾಮ ಪಂಚಾಯತ್ ನಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಪಂಚಾಯತ್ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.
2022-23 ಹಾಗೂ 2023-24ನೇ ಸಾಲಿನ ನರೇಗಾ, ತೆರಿಗೆ ವಸೂಲಿ, 14ನೇ ಮತ್ತು 15ನೇ ಹಣಕಾಸು ಯೋಜನೆ, ಸಾಕ್ಷರತಾ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಗ್ರಾಮಸಭೆಯಲ್ಲಿ ಚರ್ಚಿಸಿ, ನಿಯಮಾನುಸಾರ ನಡಾವಳಿ ಸಿದ್ಧಪಡಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೋನಾ ಸೇರಾ ಅವರು ನರೇಗಾ ಕಡತವನ್ನು ಮಾತ್ರ ಹಾಜರುಪಡಿಸಿದ್ದು, ಉಳಿದ ಯೋಜನೆಗಳ ದಾಖಲೆಗಳನ್ನು ಹಾಜರುಪಡಿಸಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಸಂಬಂಧ 2024ರ ಡಿಸೆಂಬರ್ 10ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಇದರ ಆಧಾರದ ಮೇಲೆ ಬುಧವಾರದಿಂದ ಆ.21ರವರೆಗೆ ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಆ.19ರಂದು ಪೂರ್ವಾಹ್ನ 11.30ರ ಸುಮಾರಿಗೆ ಗಾಣದಾಳ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಯೊಬ್ಬರು ತನಿಖೆ ನಡೆಸಿದರು. ಈ ಸಂದರ್ಭದಲ್ಲಿ ಹಿಂದಿನ ಪಿಡಿಒ ಸೋನಾ ಸೇರಾ, ಹಾಲಿ ಪಿಡಿಒ ತಾಯಪ್ಪ ನಾಯಕ, ಪಂಚಾಯತ್ ಸಿಬ್ಬಂದಿ ಹಾಗೂ ದೂರುದಾರ ಪ್ರಾಣೇಶ ಅವರಿಂದ ಮಾಹಿತಿ ಕಲೆ ಹಾಕಿದರು.






