ರಾಯಚೂರಿನಲ್ಲಿ ಎಲ್‌ಪಿಜಿ ಕೊರತೆ : ಗ್ಯಾಸ್‌ಗಾಗಿ ಸರತಿ ಸಾಲಿನಲ್ಲಿ ನಿಂತ ಆಟೋ ಚಾಲಕರು

ರಾಯಚೂರು: ಕಳೆದ ಒಂದು ವಾರದಿಂದ ಗ್ಯಾಸ್ ಪಂಪ್‌ಗಳಲ್ಲಿ ಎಲ್‌ಪಿಜಿ ಸರಬರಾಜು ಸ್ಥಗಿತಗೊಂಡಿದ್ದ ಹಿನ್ನೆಲೆ, ಇಂದು ಗ್ಯಾಸ್ ವಿತರಣೆಯ ಆರಂಭವಾಗುತ್ತಿದ್ದಂತೆ ನಗರದ ಟಿಪ್ಪು ಸುಲ್ತಾನ್ ಉದ್ಯಾನದ ಬಳಿಯ ಪಂಪ್ ಬಳಿ ನೂರಾರು ಆಟೋಗಳು ಸರತಿಯಲ್ಲಿ ನಿಂತ ದೃಶ್ಯ ಕಂಡುಬಂತು.
ಎಲ್‌ಪಿಜಿ ಗ್ಯಾಸ್ ಮೇಲೆ ಅವಲಂಬಿತವಾಗಿರುವ ಆಟೋ ಚಾಲಕರು ರಾತ್ರಿ ಪೂರ್ತಿ ಸಾಲಿನಲ್ಲಿ ನಿಂತಿದ್ದು, ಬೇಡಿಕೆಗೆ ತಕ್ಕಷ್ಟು ಗ್ಯಾಸ್ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಬಂಕ್ ಮುಂದೆ ನೂರಾರು ಆಟೋಗಳು ಕಾಯುತ್ತಿರುವುದರಿಂದ ಚಾಲಕರ ದಿನನಿತ್ಯದ ದುಡಿಮೆಗೆ ಅಡಚಣೆ ಉಂಟಾಗಿದೆ.
ಸುಮಾರು 10 ದಿನಗಳಿಂದ ಆಟೋ ಸಂಚಾರ ಸರಿಯಾಗಿ ನಡೆಯದ ಕಾರಣ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇತ್ತ ಗ್ಯಾಸ್ ಬೆಲೆಯೂ ಹೆಚ್ಚಳವಾಗಿದ್ದು, ಚಾಲಕರ ಆರ್ಥಿಕ ಒತ್ತಡ ಹೆಚ್ಚಾಗಿದೆ. ಒಂದು ಆಟೋಗೆ 500 ರೂ. ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಂದಲೇ ಆಟೋಗಳು ಗ್ಯಾಸ್ ಬಂಕ್ ಮುಂದೆ ನಿಲುಗಡೆಯಾಗಿ ಹಳೆಯ ಡಿಸಿ ಕಚೇರಿವರೆಗೆ ಉದ್ದನೆಯ ಸಾಲು ನಿರ್ಮಾಣವಾಗಿದೆ.
ಈ ನಡುವೆ ಅಡುಗೆ ಅನಿಲ ಸಮಸ್ಯೆ ಮುಂದುವರಿದಿದ್ದಾಗಲೇ ಸಿಎನ್‌ಜಿ ಪಡೆಯಲು ಕೂಡ ಪರದಾಟ ಆರಂಭವಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ 15 ದಿನಗಳಿಂದ ಗ್ಯಾಸ್ ಕೊರತೆ ಎದುರಾಗುತ್ತಿದ್ದು, ಕೆಲವೆಡೆ ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಝಾದ್ ಆಟೋ ಚಾಲಕರ ಸಂಘದ ಸೈಯದ್ ಭಾಷಾ ಖಾದ್ರಿ ಆಗ್ರಹಿಸಿದ್ದಾರೆ.






