ರಾಯಚೂರು | ಹಾಶ್ಮಿಯ ಕಾಂಪೌಂಡ್ ವ್ಯಾಪ್ತಿಯ ಮನೆಗಳ ತೆರವು ಸಂವಿಧಾನ ವಿರೋಧಿಯಾಗಿದೆ : ಮಹೇಂದ್ರ ಕುಮಾರ ಮಿತ್ರ

ರಾಯಚೂರು: ನಗರದ ಹಾಶ್ಮಿಯ ಕಾಂಪೌಂಡ್ ಬಳಿಕ ವಕ್ಫ್ ಮಂಡಳಿಯ ಜಾಗದಲ್ಲಿ 34 ಕುಟುಂಬಗಳು ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ತೆರವು ಕಾರ್ಯಾಚರಣೆ ಮಾಡಿದ್ದು ಸಂವಿಧಾನ ವಿರೋಧಿಯಾಗಿದೆ ಎಂದು ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ವಕೀಲ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಂದ್ರ ಕುಮಾರ ಮಿತ್ರ, ಹಲವು ವರ್ಷಗಳಿಂದ ಅಲ್ಲಿನ ನಿವಾಸಿಗಳು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಗುಲ್ಬರ್ಗಾ ವಕ್ಫ್ ಟ್ರಿಬ್ಯೂನಲ್ ನ್ಯಾಯಾಲಯದ ಆದೇಶದ ಅನ್ವಯ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ತೆರವು ಮಾಡಿದ್ದಾರೆ. ತೆರವು ಮಾಡುವ ಮೊದಲು 45 ದಿನಗಳ ಕಾಲಾವಕಾಶ ನೀಡಬೇಕಿತ್ತು. ಮೂರು ಬಾರಿ ನೋಟೀಸ್ ನೀಡಬೇಕಿತ್ತು. ಆದರೆ ಏಕಾಏಕಿ ತೆರವು ಮಾಡಲಾಗಿದೆ ಎಂದು ಹೇಳಿದರು.
5-2-1998ರ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಮಸ್ಜಿದ್ ಎ ಹಾಶ್ಮಿಯಾ ಆವರಣದಲ್ಲಿ ವಾಸಮಾಡುತ್ತಿರುವ 34 ಕುಟುಂಬಗಳು ಅಧಿಕೃತ ನಿವಾಸಿಗಳಾಗಿದ್ದಾರೆ ಮತ್ತು ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) 1974ರ ಕಾಯ್ದೆಯೂ ಈ ನಿವಾಸಿಗಳಿಗೆ ಅನ್ವಯವಾಗುವುದಿಲ್ಲ, ಹೀಗಾಗಿ ನಿವಾಸಿಗಳ ಮನೆಗಳ ತೆರವು ಕಾನೂನುಬಾಹಿರವಾಗಿದೆ ಎಂದು ಹೇಳಿದರು.
ಹಾಶ್ಮಿಯಾ ಕಾಂಪೌಂಡ್ ನಿವಾಸಿಗಳ ಮನೆಗಳ ತೆರವು ಮಾಡುವ ಮೊದಲು ರಾಯಚೂರು ತಹಶಿಲ್ದಾರರು ನೀಡಿದ ವಕ್ಫ್ ಮಂಡಳಿಯ ಆದೇಶದ ಪ್ರತಿ ಮೃತರ ವಿರುದ್ಧ ಹೊರಡಿಸಿದ ಆದೇಶವಾಗಿದೆ. ಈಗ ವಾಸವಾಗಿರುವ ಹೆಸರಿನಲ್ಲಿ ಇರಲಿಲ್ಲ. ಅಧಿಕಾರಿಗಳು ತರಾತುರಿಯಲ್ಲಿ ಪೊಲೀಸ್ ಬಲದೊಂದಿಗೆ ತೆರವು ಮಾಡಿದ್ದು ಕಾನೂನು ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹುಸೇನ್ ಬಾಶ ಪಲಕನಮರಡಿ, ನರಸಿಂಹಲು ಪೋತಗಲ್ ಉಪಸ್ಥಿತರಿದ್ದರು.







