"ಪರಮೇಶ್ವರ ಅಥವಾ ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಿ": ಬಲಗೈ ಸಮುದಾಯ ಒತ್ತಾಯ

ರಾಯಚೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಹಿರಿಯಾದ ಡಾ.ಜಿ.ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಯುವಕರನ್ನು ಆಯ್ಕೆ ಮಾಡುವುದಾದರೆ ಪ್ರಿಯಾಂಕ್ ಖರ್ಗೆಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೀಮಣ್ಣ ಮಂಚಾಲ ಒತ್ತಾಯಿಸಿದರು.
ಅವರು ರವಿವಾರ ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸುದೀರ್ಘ ರಾಜಕೀಯದಲ್ಲಿ ಡಾ.ಪರಮೇಶ್ವರ ಅವರು ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಅಧಿಕಾರ ನಿರ್ವಹಿಸಿದ್ದಾರೆ. ಅನುಭವಿ ರಾಜಕಾರಣಿಯಾಗಿರುವವರನ್ನು ಮುಖ್ಯಮಂತ್ರಿಯನ್ನಾಗಿಸಬೇಕಿತ್ತು. ಸೇವಾ ಹಿರಿತನದ ಮೇಲೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಮನವಿ ಮಾಡಿದರು.
ಯುವಕರನ್ನು ಅಧಿಕಾರ ನೀಡುವದೇ ಆದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿ ಅಧಿಕಾರ ನಿರ್ವಹಿಸಿರುವ ಪ್ರಿಯಾಂಕ್ ಖರ್ಗೆಯವರನ್ನು ಉಪಮುಖ್ಯಮಂತ್ರಿ ಮಾಡಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ರಾಜಕೀಯ ಅಧಿಕಾರ ನೀಡಬೇಕೆಂದರು.
ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಇ.ಕುಮಾರ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಬಲಗೈ ಸಮೂದಾಯಕ್ಕೆ ರಾಜಕೀಯ ಅಧಿಕಾರ ದೊರೆತಿಲ್ಲ.14 ಬ್ಲಾಕ್ ಕಾಂಗ್ರೆಸ್ ಘಟಕಗಳಲ್ಲಿ ಒಂದೇ ಒಂದು ಬಲಗೈ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿಲ್ಲ. ನಿಗಮ ಮಂಡಳಿಗಳಲ್ಲಿ ಕೆಲವರಿಗೆ ಮಾತ್ರ ನಾಮನಿರ್ದೇಶನ ಮಾಡಿದ್ದು ಬಿಟ್ಟರೆ ರಾಜಕೀಯ ಅಧಿಕಾರ ನೀಡುವಲ್ಲಿ ಅನ್ಯಾಯವಾಗಿದ್ದು ಸರಿಸಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎನ್.ಸತ್ಯನಾರಾಯಣ, ಬಸವರಾಜ.ಆರ್, ಆರ್.ರಾಮಕೃಷ್ಣ, ಆಂಜಿನಯ್ಯೇ ಕೊಂಬಿನ್ ,ಎಂ.ಮಾರೆಪ್ಪ, ಶಶಿಧರ, ಗಾರ್ಲೆ ದಿಗಂಬರ್, ವಿಜಯ ಗಾರ್ಲೆ, ಬಾಬು.ಬಿ.ಕೆ. ನಾಗರಾಜ, ಮಹೇಶ, ಹನುಮಂತ ಸೇರಿದಂತೆ ಅನೇಕರಿದ್ದರು.






