Manvi | ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳ ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ

ಮಾನ್ವಿ, ಮೇ.14 : ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿ ಎಐಸಿಸಿಟಿಯು ನೇತೃತ್ವದಲ್ಲಿ ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಅಧಿಸೂಚನೆಯ ಪ್ರತಿಗಳನ್ನು ದಹಿಸಿ ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ಮುಖಂಡ ರಾಜ ಸಾಬ್ ಅವರು, “ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಪರ ಕಾಯ್ದೆಗಳನ್ನು ದುರ್ಬಲಗೊಳಿಸಿ, ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಾಗಿ ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದು ದೇಶದ ಕೋಟ್ಯಾಂತರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಮರಣ ಶಾಸನವಾಗಿದ್ದು, ಕಾರ್ಮಿಕ ವರ್ಗ ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿಟಿಯು ಕರೆ ನೀಡಿರುವ ಜಿಲ್ಲಾವ್ಯಾಪಿ ಪ್ರತಿಭಟನೆ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಕಾರ್ಮಿಕ ಸಂಘಟನೆಗಳು ಇನ್ನಷ್ಟು ಬಲವಾದ ಹೋರಾಟವನ್ನು ರೂಪಿಸಲಿವೆ ಎಂದು ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಐಸಿಸಿಟಿಯು ಮುಖಂಡರಾದ ರಾಜಸಾಬ್, ಈಶಪ್ಪ ಗೌಡ, ವೆಂಕಟೇಶ್ ಕೋರಿ, ಚಂದು ಸಾಬ್, ಗೋಪಾಲ್ ರಾವ್, ಜಲೀಲ್ ಪಾಶಾ, ಇಮ್ರಾನ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.




