Manvi | ಫೋಟೋ ಸ್ಟುಡಿಯೋದಲ್ಲಿ ಆಕಸ್ಮಿಕ ಬೆಂಕಿ ; ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ಭಸ್ಮ

ಮಾನ್ವಿ : ತಾಲೂಕಿನ ಪೋತ್ನಾಳ ಗ್ರಾಮದ ಮಧ್ಯಭಾಗದಲ್ಲಿರುವ ಸಂಜನಾ ಫೋಟೋ ಸ್ಟುಡಿಯೋದಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಭೀಕರ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಡಿಜಿಟಲ್ ಉಪಕರಣಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಟುಡಿಯೋದಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣವೇ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಬೆಂಕಿಯ ತೀವ್ರತೆಗೆ ಸ್ಟುಡಿಯೋದಲ್ಲಿದ್ದ ಅತ್ಯಾಧುನಿಕ ಡಿಜಿಟಲ್ ಕ್ಯಾಮೆರಾಗಳು, ಕಂಪ್ಯೂಟರ್‌ಗಳು, ಫೋಟೋ ಪ್ರಿಂಟಿಂಗ್ ಯಂತ್ರಗಳು, ಆಲ್ಬಂಗಳು, ಪೀಠೋಪಕರಣಗಳು ಸೇರಿದಂತೆ ಇತರೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಘಟನೆಯಿಂದ ಸ್ಟುಡಿಯೋ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ನಷ್ಟದ ಪ್ರಮಾಣ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.




