ಮಾನ್ವಿ | ಅಖಿಲ ಭಾರತ ಮುಷ್ಕರ ಬೆಂಬಲಿಸಿ ಎಐಸಿಸಿಟಿಯ ವತಿಯಿಂದ ಪ್ರಚಾರಾಂದೋಲನ ಜಾಥಾ

ಮಾನ್ವಿ: ನಾಲ್ಕು ಕಾರ್ಮಿಕ ವಿರೋಧಿ ವೇತನ ಸಂಹಿತೆಗಳು, ರೈತ ವಿರೋಧಿ ಕಾಯ್ದೆಗಳು ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಕತ್ತು ಹಿಸುಕಿ ಕೊಂದಿದೆ ಎಂದು ಎಐಸಿಸಿಟಿಯ ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀರ್ದಾರ್ ಆರೋಪಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸರ್ಕಾರದ ರೈತ–ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಪ್ರಚಾರ ಜಾಥ ನಡೆಸಿ ಅವರು ಮಾತನಾಡಿದರು.
ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಫೆ.12ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲವಾಗಿ ಈ ಜಾಥೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ಮಾತ್ರವಲ್ಲ, ಭಾರತೀಯ ಪ್ರಜೆಗಳ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.
ಕಾರ್ಮಿಕರಿಗೆ ಇರುವ ಸಂಘಟನೆಯ ಹಕ್ಕು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು, ನ್ಯಾಯಯುತ ವೇತನ, ಸಮಾನ ವೇತನ, ಕೆಲಸ ಮತ್ತು ಶಿಕ್ಷಣದ ಹಕ್ಕು ಸೇರಿದಂತೆ ಸಂವಿಧಾನಬದ್ದ ಹಕ್ಕುಗಳನ್ನು ಕ್ರಮೇಣ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರು ದಶಕಗಳ ಹೋರಾಟ ಹಾಗೂ ತ್ಯಾಗಗಳಿಂದ ಗಳಿಸಿದ ಕಾನೂನುಗಳನ್ನು ರದ್ದುಪಡಿಸಿ, ಮಾಲಕರ ಪರವಾದ ಸಂಹಿತೆಗಳನ್ನು ಜಾರಿ ಮಾಡಲಾಗಿದೆ. ಈ ಸಂಹಿತೆಗಳನ್ನು ಹಿಂಪಡೆಯುವವರೆಗೆ ಮತ್ತು ರದ್ದುಪಡಿಸಲಾದ 29 ಕಾರ್ಮಿಕ ಕಾನೂನುಗಳನ್ನು ಮರುಸ್ಥಾಪಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಂದು ಸಾಬ್, ಮಾಬು ಸಾಬ್, ಶಿವಪುತ್ರಪ್ಪ, ವೆಂಕಟೇಶ್, ಲಾಲ್ ಸಾಬ್, ಜೋಶಪ್ಪ, ಬಾಲಪ್ಪ, ಬಸವರಾಜ್, ಚಾಂದ್ ಪಾಶ ಹಾಗೂ ಇಲಿಯಾಸ್ ಉಪಸ್ಥಿತರಿದ್ದರು.







