ಮಾನ್ವಿ | ಜ.18ರಂದು ಉಚಿತ ಸಾಮೂಹಿಕ ವಿವಾಹ : ಯು.ಟಿ. ಖಾದರ್ ಸಹಿತ ಹಲವು ಸಚಿವರ ಆಗಮನ

ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಪಕ್ಕದ ಬಯಲು ಜಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆ ಸಿದ್ಧತೆಗಳನ್ನು ಶಾಸಕ ಹಂಪಯ್ಯನಾಯಕ ಹಾಗೂ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಮಂಗಳವಾರ ಪರಿಶೀಲಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರ ನೇತೃತ್ವದಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ.
ಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ರವಿ ಬೋಸರಾಜು, ಜ.18 ರಂದು ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕೈಗೊಳ್ಳಲು ಸಂಘಟಕರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಪಿಐ ಸೋಮಶೇಖರ್, ಎಸ್. ಕೆಂಚರೆಡ್ಡಿ, ಸೈಯದ್ ಅಕ್ಬರ್ ಪಾಷಾ ಹುಸೇನಿ, ಕಾಂಗ್ರೆಸ್ ಮುಖಂಡರಾದ ಖಾಲಿದ್ ಖಾದ್ರಿ, ಅಮ್ಜದ್ ಸೇಠ್, ರಾಜಾ ಸುಭಾಶ್ಚಂದ್ರನಾಯಕ, ಚಂದ್ರಶೇಖರ್ ಕುರುಡಿ, ಆರ್. ಗುರುನಾಥ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.





