Manvi | ತುಂಗಭದ್ರಾ ನೀರಾವರಿ ಕಾರ್ಮಿಕರ ಖಾಯಂಗೊಳಿಸುವಂತೆ ಆಗ್ರಹಿಸಿ ಆ.19ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಾನ್ವಿ : ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕಳೆದ 25–30 ವರ್ಷಗಳಿಂದ ಖಾಯಂ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿ, ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ನೇತೃತ್ವದಲ್ಲಿ ಆ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಚಲೋ’ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ. ನಾಗಲಿಂಗಸ್ವಾಮಿ ತಿಳಿಸಿದರು.
ತುಂಗಭದ್ರಾ ನೀರಾವರಿ ಯೋಜನೆಯ ಕಾಲುವೆಗಳು, ವಿತರಣಾ ವ್ಯವಸ್ಥೆ ಹಾಗೂ ನೀರಾವರಿ ನಿರ್ವಹಣೆಯಂತಹ ಜವಾಬ್ದಾರಿಯುತ ಕೆಲಸಗಳನ್ನು ಕಾರ್ಮಿಕರು ಹಲವು ದಶಕಗಳಿಂದ ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ದೀರ್ಘ ಸೇವೆಯ ನಂತರವೂ ಅವರನ್ನು ಗುತ್ತಿಗೆ ಪದ್ಧತಿಯಡಿ ಮುಂದುವರಿಸುತ್ತಿರುವುದು ಅನ್ಯಾಯವಾಗಿದೆ ಎಂದು ಅವರು ಹೇಳಿದರು.
ಕಾರ್ಮಿಕರನ್ನು ಖಾಯಂಗೊಳಿಸುವುದು, ಗುತ್ತಿಗೆ ಪದ್ಧತಿ ರದ್ದುಪಡಿಸುವುದು, ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸುವುದು, ಬಾಕಿ ವೇತನವನ್ನು ಪಾವತಿಸುವುದು ಹಾಗೂ ಕಾನೂನುಬದ್ಧ ಕಾರ್ಮಿಕ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚೆಗೆ ಸಂಘದ ನಿಯೋಗ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದ್ದು, ಆ.19ರಂದು ನಡೆಯುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವಂತೆ ಮನವಿ ಮಾಡಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಸಲ್ಲಿಸಿ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವಂತೆ ಹಾಗೂ ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಲಾಗಿದೆ.
ಆ.19ರಂದು ನಡೆಯಲಿರುವ ಬೆಂಗಳೂರು ಚಲೋ ಹೋರಾಟದಲ್ಲಿ ತುಂಗಭದ್ರಾ ನೀರಾವರಿ ಯೋಜನೆಯ ಎಲ್ಲ ವಿಭಾಗ ಹಾಗೂ ಉಪವಿಭಾಗಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಸಂಘ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಿರಿವಾರ ವಿಭಾಗದ ಅಧ್ಯಕ್ಷ ರಾಜಾಸಾಬ್ ಮಲ್ಲಟ, ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ ಬಾಗಲವಾಡ, ಬಸಲಿಂಗಪ್ಪ, ಜಲೀಲ್ ಪಾಷಾ, ಗೋಪಾಲ ರಾವ್, ಶಿವಣ್ಣ, ನಾಗರಾಜ್, ಚಂದ್ರಶೇಖರ್, ಯೂಸುಫ್ ಇದ್ದರು.






