ಮಸ್ಕಿ | ಶಂಕುಸ್ಥಾಪನೆ ನೆರವೇರಿಸಿದ ಜಾಗದಲ್ಲೇ ತಾಪಂ ಕಟ್ಟಡ ನಿರ್ಮಿಸಲು ಭೀಮ್ ಸೇನೆಯಿಂದ ಒತ್ತಾಯ

ಮಸ್ಕಿ: ತಾಲೂಕಿನ ನೂತನ ತಾಲೂಕು ಪಂಚಾಯಿತಿ ಕಟ್ಟಡವನ್ನು ವೆಂಕಟಾಪುರ ರಸ್ತೆಯ ಪ್ರಜಾಸೌಧದ ಹಿಂಭಾಗದಲ್ಲಿ ಈಗಾಗಲೇ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿರುವ ಜಾಗದಲ್ಲಿಯೇ ನಿರ್ಮಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಮಸ್ಕಿ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಮಸ್ಕಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ವೆಂಕಟಾಪುರ ರಸ್ತೆಯ ಪ್ರಜಾಸೌಧದ ಹಿಂಭಾಗದಲ್ಲಿ ಸುಮಾರು 3 ಎಕರೆ ಜಾಗ ಗುರುತಿಸಿ, ಏಪ್ರಿಲ್ 21, 2026ರಂದು ನೂತನ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಸುಮಾರು 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ಕ್ಯಾಶ್‌ಟ್ಯಾಕ್ ಸಂಸ್ಥೆಗೆ ವಹಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದರೆ, ಈಗಾಗಲೇ ಸ್ಥಳ ಗುರುತಿಸಿ ಶಂಕುಸ್ಥಾಪನೆ ನೆರವೇರಿಸಿರುವ ಜಾಗದಲ್ಲಿ ಕಾಮಗಾರಿ ಆರಂಭಿಸದೆ, ಮಸ್ಕಿ–ಸಿಂಧನೂರು ರಸ್ತೆಯ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಪಟ್ಟಣದಿಂದ ದೂರದ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದರೆ ಮಹಿಳೆಯರು, ವಯೋವೃದ್ಧರು, ರೈತರು ಹಾಗೂ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ವೆಂಕಟಾಪುರ ರಸ್ತೆಯ ಸ್ಥಳದಲ್ಲಿ ಕಟ್ಟಡ ನಿರ್ಮಿಸಿದರೆ ಸಾರ್ವಜನಿಕ ಸಾರಿಗೆ ಸೌಲಭ್ಯ ಹಾಗೂ ಪ್ರಜಾಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಸಂಪರ್ಕ ಇರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದೆ.
ಯಾವುದೇ ಖಾಸಗಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕಟ್ಟಡ ನಿರ್ಮಾಣದ ಸ್ಥಳ ಬದಲಾಯಿಸಬಾರದು. ಈಗಾಗಲೇ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿರುವ ಸ್ಥಳದಲ್ಲಿಯೇ ಕಾಮಗಾರಿ ಆರಂಭಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಆಗ್ರಹಿಸಿದೆ.
ಬೇಡಿಕೆಯನ್ನು ಪರಿಗಣಿಸದೆ ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದರೆ, ತಾಲೂಕು ಘಟಕದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ತಾಲೂಕು ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.






