ಮಸ್ಕಿ | ನರಿ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಿಸಿದ ರೈತ ಶಿವಾನಂದ ಬ್ಯಾಲಿಹಾಳ

ಮಸ್ಕಿ: ನರಿ ದಾಳಿಗೆ ಸಿಲುಕಿ ಜೀವಭಯದಲ್ಲಿದ್ದ ಜಿಂಕೆ ಮರಿಯನ್ನು ಸಮಯಪ್ರಜ್ಞೆಯಿಂದ ರಕ್ಷಿಸಿ, ಮಾನವೀಯತೆ ಮೆರೆದ ರೈತ ಶಿವಾನಂದ ಬ್ಯಾಲಿಹಾಳ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಲ್ಲೂಕಿನ ತಲೆಖಾನ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಹೊಲದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಶಿವಾನಂದ ಬ್ಯಾಲಿಹಾಳ ಅವರು, ನರಿ ಜಿಂಕೆ ಮರಿಯನ್ನು ಬೆನ್ನಟ್ಟುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ನರಿಯನ್ನು ಓಡಿಸಿ, ಅಪಾಯದಲ್ಲಿದ್ದ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಜಿಂಕೆ ಮರಿಯನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ.
ಮೂಕಪ್ರಾಣಿಯ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅದರ ಜೀವ ಉಳಿಸಿದ ರೈತನ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಂಕೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ :
ಇದೇ ಸಂದರ್ಭದಲ್ಲಿ, ತಲೆಖಾನ ಗ್ರಾಮದ ಪ್ರಭುಗೌಡ ಅವರು ಅರಣ್ಯ ಪ್ರದೇಶದಲ್ಲಿ ಜಿಂಕೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದಾಗ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಜಿಂಕೆಗಳು ಸೇರಿದಂತೆ ಇತರ ವನ್ಯಜೀವಿಗಳಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು, ಅವುಗಳ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.






