ಮಸ್ಕಿ | ಬೈಕ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಯದ್ದಲದಿನ್ನಿ ಗ್ರಾಮದಲ್ಲಿ ಜ.2ರಂದು ಹೊಸ ವರ್ಷದ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಯದ್ದಲದಿನ್ನಿ ಗ್ರಾಮದ ಮಹೇಶ್ ಅವರಿಗೆ ಸೇರಿದ ಎಚ್‌ಎಫ್ ಡಿಲಕ್ಸ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೇ ವೇಳೆ ವೀರೇಂದ್ರ ಗೌಡ ಎಂಬುವರ ಬೈಕ್‌ಗೆ ಸಹ ಬೆಂಕಿ ಹಚ್ಚಲು ಯತ್ನಿಸಲಾಗಿದ್ದು, ಮನೆಯವರು ತಕ್ಷಣ ಗಮನಿಸಿ ಬೆಂಕಿಯನ್ನು ಆರಿಸಿದ್ದಾರೆ. ಇದಲ್ಲದೇ, ಕಳೆದ ತಿಂಗಳೂ ಗ್ರಾಮದ ರೈತರೊಬ್ಬರ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು. ಮೇಲಿಂದ ಮೇಲೆ ಇಂತಹ ದುಷ್ಕೃತ್ಯಗಳು ನಡೆಯುತ್ತಿರುವುದರಿಂದ ಯದ್ದಲದಿನ್ನಿ ಗ್ರಾಮಸ್ಥರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.
ಇಂತಹ ದುಷ್ಕರ್ಮಿಗಳನ್ನು ತಕ್ಷಣ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಘಟನೆಗಳು ನಡೆಯುತ್ತಿದ್ದರೂ, ಹಾಲಾಪೂರ ಗ್ರಾಮ ಪಂಚಾಯಿತಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಯಪ್ಪಗೌಡ ಮತ್ತು ಶಿವಶಂಕರಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.





